ನವದೆಹಲಿ, ಜ 04 ( Dajiworld News/MB) : "ಸಾವರ್ಕರ್ ಹಾಗೂ ಗೋಡ್ಸೆ ನಡುವೆ ದೈಹಿಕ ಸಂಬಂಧವಿತ್ತು" ಎಂದು ಉಲ್ಲೇಖ ಮಾಡಿರುವ ಕೈಪಿಡಿಯನ್ನು ಮಧ್ಯಪ್ರದೇಶದ ಕಾಂಗ್ರೆಸ್ ಸಮಿತಿ ಪ್ರಕಟ ಮಾಡಿದ್ದು ಇದು ತೀವ್ರ ವಿವಾದಕ್ಕೆ ಹಾಗೂ ಆಕ್ರೋಶಕ್ಕೆ ಕಾರಣವಾಗಿದೆ.
ಭೋಪಾಲ್ನ ಕಾಂಗ್ರೆಸ್ ಸಮಿತಿ ವತಿಯಿಂದ ಆಯೋಜನೆ ಮಾಡಲಾಗಿದ್ದ ಅಖಿಲ ಭಾರತ ಕಾಂಗ್ರೆಸ್ ಸೇವಾದಳ ತರಬೇತಿ ಶಿಬಿರದಲ್ಲಿ "ಹೌ ಬ್ರೇವ್ ವಾಸ್ ಸಾವರ್ಕರ್" ಎಂಬ ಪುಸ್ತಕವನ್ನು ವಿರತಣೆ ಮಾಡಿದ್ದು ಈ ಪುಸ್ತಕದಲ್ಲಿ "ಸಾವರ್ಕರ್ ಹಾಗೂ ಗೋಡ್ಸೆ ನಡುವೆ ದೈಹಿಕ ಸಂಬಂಧವಿತ್ತು" ಎಂಬ ಉಲ್ಲೇಖ ಮಾಡಲಾಗಿದೆ.
ಈ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತವಾಗಿದ್ದು "ಈ ಹೇಳಿಕೆ ಅಸಹ್ಯವಾದದ್ದು, ನೆಹರು ಹಾಗೂ ಗಾಂಧಿ ಕುಟುಂಬವನ್ನು ಬಿಟ್ಟು ಉಳಿದ ನಾಯಕರನ್ನು ಕಾಂಗ್ರೆಸ್ ಕೆಣಕುತ್ತಿದೆ" ಎಂದು ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ.
"ಕಾಂಗ್ರೆಸ್ ನಾಯಕರಿಗೆ ಇರುವ ಎಷ್ಟೋ ಸಂಬಂಧಗಳ ಕುರಿತು ಈ ಪ್ರಪಂಚಕ್ಕೆ ತಿಳಿದಿದೆ. ಆದರೆ, ನಮಗೆ ಅದನ್ನು ಇನ್ನೊಮ್ಮೆ ಹೇಳಿ ಕೆಸರೆರಚಲು ಇಚ್ಛೆಯಿಲ್ಲ" ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಅನಿಲ್ ಜೈನ್ ತಿಳಿಸಿದ್ದಾರೆ.
ಈ ಹೇಳಿಕೆಗೆ ಸಾವರ್ಕರ್ ಮೊಮ್ಮಗ ರಂಜಿತ್ ಸಾವರ್ಕರ್ ಕಿಡಿಕಾರಿದ್ದು, "ಇಂತಹ ಮಾನಹಾನಿ ಹೇಳಿಕೆ ನೀಡಿರುವ ಕಾಂಗ್ರೆಸ್ ಹಾಗೂ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡಬೇಕು" ಎಂದು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನೇತೃತ್ವದ ಸರ್ಕಾರವನ್ನು ಒತ್ತಾಯ ಮಾಡಿದ್ದಾರೆ.