ತುಮಕೂರು, ಜ 04 ( Dajiworld News/MB) : ಖಾಸಗಿ ಬಸ್ ಹಾಗು ಓಮ್ನಿ ಕಾರು ಮುಖಾಮುಖಿ ಡಿಕ್ಕಿಯಾದ ಪರಿಣಾಮ ಕಾರಿನಲ್ಲಿದ್ದ ಮೂವರು ಸಜೀವ ದಹನವಾಗಿರುವ ದಾರುಣ ಘಟನೆ ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 206ರ ದೊಡ್ಡಗುಣಿ ಗ್ರಾಮದ ಬಳಿ ಶನಿವಾರ ಮುಂಜಾನೆ ನಡೆದಿದೆ.
ಮೃತ ವ್ಯಕ್ತಿಗಳನ್ನು ಗುಬ್ಬಿ ತಾಲೂಕಿನ ಎನ್. ಹೊಸಳ್ಳಿ ಗ್ರಾಮದ ವಸಂತಕುಮಾರ್ (55), ರಾಮಯ್ಯ(55) ಹಾಗೂ ನರಸಮ್ಮ (65) ಎಂದು ಗುರುತಿಸಲಾಗಿದೆ.
ಬೆಂಗಳೂರಿನಿಂದ ಶಿವಮೊಗ್ಗಕ್ಕೆ ತೆರಳುತ್ತಿದ್ದ ಬಸ್ ಹಾಗೂ ಎನ್ ಹೊಸಹಳ್ಳಿ ಗ್ರಾಮದಿಂದ ನಿಟ್ಟೂರಿಗೆ ಹೋಗುತ್ತಿದ್ದ ಕಾರಿನ ನಡುವೆ ಅಪಘಾತವಾಗಿದ್ದು ಕಾರಿನಲ್ಲಿದ್ದ ಒಟ್ಟು ಆರು ಪ್ರಯಾಣಿಕರ ಪೈಕಿ ಮೂವರು ಡಿಕ್ಕಿಯಾದ ರಭಸಕ್ಕೆ ಕಾರಿನಿಂದ ಹೊರಗೆ ಬಿದಿದ್ದು ಉಳಿದ ಮೂವರು ಕಾರಿನಲ್ಲೇ ದಹನವಾಗಿದ್ದಾರೆ.
ಅಪಘಾತದಿಂದಾಗಿ ಕಾರು ಮತ್ತು ಬಸ್ ಸಂಪೂರ್ಣವಾಗಿ ಸುಟ್ಟುಹೋಗಿದ್ದು ನರಸಿಂಹಮೂರ್ತಿ, ರಾಧಾಮಣಿ ಹಾಗೂ ರವಿ ಎಂಬವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಅಪಘಾತವಾದಂತೆ ಬಸ್ನಲ್ಲಿದ್ದ ಪ್ರಯಾಣಿಕರು ಕೆಳಕ್ಕೆ ಇಳಿದಿದ್ದು ಬಸ್ನಲ್ಲಿದ್ದ ನಾಲ್ವರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಕಾರಿನ ಬೆಂಕಿ ಬಸ್ಗೂ ಹರಡಿದ್ದು ಬಸ್ ಕೂಡಾ ಸುಟ್ಟು ಹೋಗಿದೆ.
ಈ ಕುರಿತು ಗುಬ್ಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.