ಬೆಂಗಳೂರು, ಜ 04 ( Dajiworld News/MB) : ಜನಪ್ರತಿನಿಧಿಗಳು ತಮ್ಮ ಖಾಸಗಿ ವಾಹನಗಳಲ್ಲಿ ತಮ್ಮ ಹುದ್ದೆ, ಸರ್ಕಾರಿ ಲಾಂಛನ, ಚಿಹ್ನೆ ಮತ್ತಿತರರ ಮಾಹಿತಿಗಳನ್ನು ಒಳಗೊಂಡ ಯಾವುದೇ ನಾಮಫಲಕಗಳನ್ನು ಹಾಕಬಾರದು ಎಂದು ಹೈಕೋರ್ಟ್ ಮಹತ್ವದ ತೀರ್ಪನ್ನು ನೀಡಿದೆ.
ಹಾಗೆಯೇ ರಾಜ್ಯ ಮತ್ತು ಕೇಂದ್ರ ಸರ್ಕಾರಿ ಸಂಸ್ಥೆಗಳು, ಅರೆ ನ್ಯಾಯಿಕ ಸಂಸ್ಥೆಗಳ ಹೆಸರು, ಲಾಂಛನ-ಚಿಹ್ನೆಗಳನ್ನು ಹೋಲುವಂತಹ ಫಲಕಗಳನ್ನು ಖಾಸಗಿ ಸಂಘಟನೆ, ಸಂಘ-ಸಂಸ್ಥೆ, ಕಂಪನಿಗಳ ವಾಹನಗಳ ಮೇಲೆ ಅಳವಡಿಸಬಾರದು ಎಂದು ನಿರ್ದೇಶನ ನೀಡಿದ್ದು ಈ ನಿಯಮ ಉಲ್ಲಂಘನೆ ಮಾಡಿದ ವಾಹನಗಳ ಮಾಲಕರ ವಿರುದ್ಧ ಸೂಕ್ತ ಕಾನೂನು ಕ್ರಮಕೈಗೊಳ್ಳಬೇಕು ಎಂದು ಆದೇಶಿಸಿದೆ.
ನ್ಯಾಯಮೂರ್ತಿ ಆರ್.ದೇವದಾಸ್ ಪ್ರಕರಣವೊಂದರ ವಿಚಾರಣೆ ವೇಳೆ ಈ ಆದೇಶವನ್ನು ನೀಡಿದ್ದು, ಗ್ರಾಮ ಪಂಚಾಯಿತಿ ಸದಸ್ಯರಿಂದ ಲೋಕಸಭೆ ಸದಸ್ಯರವರೆಗೆ ಯಾರೂ ತಮ್ಮ ಖಾಸಗಿ ವಾಹನಗಳ ಮೇಲೆ ಯಾವುದೇ ರೀತಿಯ ನಾಮಫಲಕ ಅಳವಡಿಸಬಾರದು. ಇದು ಮಾಜಿ ಮತ್ತು ಹಾಲಿ ಜನಪ್ರತಿನಿಧಿಗಳಿಗೆ ಅನ್ವಯವಾಗುತ್ತದೆ. ಇಂತಹ ನಾಮಫಲಕವನ್ನು ತೆರವುಗೊಳಿಸಿ ಕ್ರಮಕೈಗೊಂಡು ಜ.22ರೊಳಗೆ ವರದಿ ಸಲ್ಲಿಸಬೇಕು ಎಂದು ಅಡ್ವೊಕೇಟ್ ಜನರಲ್ ಅವರಿಗೆ ತಿಳಿಸಿದ್ದಾರೆ.