ನವದೆಹಲಿ, ಜ 04(Daijiworld News/MSP): ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಕುರಿತು ರಾಷ್ಟ್ರವ್ಯಾಪಿ ನಡೆಯುತ್ತಿರುವ ಪ್ರತಿಭಟನೆಗಳ ಮಧ್ಯೆ, ಕೇಂದ್ರ ರಾಜ್ಯ ಸಚಿವ ಡಾ. ಜಿತೇಂದ್ರ ಸಿಂಗ್ , ಕೇಂದ್ರ "ಸರ್ಕಾರದ ಮುಂದಿನ ಹೆಜ್ಜೆ ರೋಹಿಂಗ್ಯಾಗಳನ್ನು ದೇಶದಿಂದ ಗಡೀಪಾರು" ಮಾಡುವುದು ಎಂದು ಹೇಳಿದ್ದಾರೆ.
ಶುಕ್ರವಾರ ಜಮ್ಮುವಿನಲ್ಲಿ ನಡೆದ ಸಮಾರಂಭವೊಂದರಲ್ಲಿ ಭಾಗವಹಿಸಿ ಮಾತನಾಡಿದ ಜಿತೇಂದ್ರ ಸಿಂಗ್, “ಜಮ್ಮು ಮತ್ತು ಕಾಶ್ಮೀರ ಸೇರಿದಂತೆ ದೇಶಾದ್ಯಂತ ಪೌರತ್ವ (ತಿದ್ದುಪಡಿ) ಕಾಯ್ದೆ ದೇಶದೆಲ್ಲೆಡೆ ಅನ್ವಯವಾಗುತ್ತದೆ. ಇದರ ಅರ್ಥವೇನೆಂದರೆ, ಸರ್ಕಾರದ ಮುಂದಿನ ನಡೆ ರೋಹಿಂಗ್ಯಾಗಳಿಗೆ ಸಂಬಂಧಪಟ್ಟಿದೆ" ಎಂದು ಹೇಳಿದ್ದಾರೆ
ಜಮ್ಮುವಿನಲ್ಲಿ ರೋಹಿಂಗ್ಯಾಗಳು ಗಣನೀಯ ಸಂಖ್ಯೆಯಲ್ಲಿದ್ದಾರೆ ಎಂದು ಸೂಚಿಸಿದ ಸಿಂಗ್, ಅವರ ಬಯೋಮೆಟ್ರಿಕ್ಗಳನ್ನು ಸಹ ಸಂಗ್ರಹಿಸಿ ಪಟ್ಟಿಯನ್ನು ಸಿದ್ಧಪಡಿಸಲಾಗುವುದು. ಶೀಘ್ರದಲ್ಲೇ ರೋಹಿಂಗ್ಯಾಗಳು ಭಾರತವನ್ನು ತೊರೆಯಬೇಕಾಗುತ್ತದೆ ಎಂದು ಹೇಳಿದರು.
ರೋಹಿಂಗ್ಯಾಗಳು ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನ ಹೀಗೆ ಮೂರು ನೆರೆಯ ರಾಷ್ಟ್ರಗಳ ಆರು ಧಾರ್ಮಿಕ ಅಲ್ಪಸಂಖ್ಯಾತರ (ಹಿಂದೂ, ಸಿಖಾ, ಬೌದ್ಧ, ಜೈನ್, ಪಾರ್ಸಿ ಮತ್ತು ಕ್ರಿಶ್ಚಿಯನ್) ಭಾಗವಲ್ಲ. ಅವರು ಮ್ಯಾನ್ಮಾರ್ ಮೂಲದವರು ಮತ್ತು ಆದ್ದರಿಂದ ಅವರು ಸಿಎಎ ಅಡಿಯಲ್ಲಿ ಭಾರತೀಯ ಪೌರತ್ವ ಪಡೆಯಲು ಅರ್ಹರಲ್ಲದ ಕಾರಣ ಹೋಗಬೇಕಾಗಿದೆ ”ಎಂದು ಜಿತೇಂದ್ರ ಸಿಂಗ್ ಹೇಳಿದರು.