ವಿಜಯಪುರ, ಜ.04 (Daijiworld News/PY) : "ನಾನು ರಾಜಕೀಯಕ್ಕೆ ಗೌರವದಿಂದ ಬಂದಿದ್ದೇನೆ, ಗೌರವದಿಂದಲೇ ನಿರ್ಗಮಿಸುತ್ತೇನೆ" ಎಂದು ಸಂಸದ ರಮೇಶ ಜಿಗಜಿಣಗಿ ತಿಳಿಸಿದ್ದಾರೆ.
ಜ.04ರ ಶನಿವಾರದಂದು ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯೊಂದರಲ್ಲಿ ಮಾತನಾಡಿದ ರಮೇಶ ಜಿಗಜಿಣಗಿ ಅವರು, "ಜನರಿಂದ ತೆಗಳಿಕೆಯ ಮಾತುಗಳು ಬರುವ ಮುನ್ನವೇ ಗೌರವದಿಂದ ನಾನು ರಾಜಕೀಯ ನಿವೃತ್ತಿ ಹೊಂದುತ್ತೇನೆ" ಎಂದು ತಮ್ಮ ಭವಿಷ್ಯದ ರಾಜಕೀಯದ ಬಗ್ಗೆ ಹೇಳಿದರು.
"ನಾನು ರಾಮಕೃಷ್ಣ ಹೆಗಡೆ ಅವರ ಸೈದ್ದಾಂತಿಕ ನಾಯಕರ ಗರಡಿಯಲ್ಲಿ ಬೆಳೆದಿದ್ದೇನೆ, ರಾಜಕೀಯಕ್ಕೆ ಗೌರವದಿಂದಲೇ ಬಂದಿದ್ದೇನೆ ಅಂತೆಯೇ ಗೌರವದಿಂದಲೇ ತೆರಳುತ್ತೇನೆ. ಹೀಗಾಗಿ ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುವ ವಿಷಯದಲ್ಲಿ ಸಂದೇಹವಿದೆ" ಎಂದು ತಿಳಿಸಿದರು.
"ವಿಜಯಪುರ ವಿಮಾನ ನಿಲ್ಧಾಣದ ವಿಷಯಗಳಲ್ಲಿದ್ದ ಗೊಂದಲಗಳು ನಿವಾರಣೆಯಾಗಿದ್ದು, ಶೀಘ್ರವೇ ರಾಜ್ಯ ಸರ್ಕಾರದ ಸಂಪುಟ ಸಭೆಯಲ್ಲಿ ಕಾಮಗಾರಿಗೆ ಚಾಲನೆ ನೀಡುವ ಬಗ್ಗೆ ತಾರ್ಕಿಕ ಅಂತ್ಯ ಸಿಗಲಿದೆ, ಆದ್ದರಿಂದ, ವಿಮಾನ ಹಾರಿಸಿಯೇ ನಿವೃತ್ತಿಯ ವಿಷಯವನ್ನು ತಿಳಿಸುತ್ತೇನೆ" ಎಂದು ತಿಳಿಸಿದರು.