ನವದೆಹಲಿ, ನ.07 (DaijiworldNews/AA): ತನಿಖೆಯ ಸಮಯದಲ್ಲಿ ಗೈರುಹಾಜರಿ, ಸ್ಥಳಾಂತರಗೊಂಡ, ಮೃತ ಅಥವಾ ನಕಲು ಎಂದು ವರ್ಗೀಕರಿಸಿ ಕರಡು ಪಟ್ಟಿಯಿಂದ ಹೊರಗುಳಿದ ಮತದಾರರನ್ನು ಪತ್ತೆಹಚ್ಚಲು ವಿಶೇಷ ಅಭಿಯಾನವನ್ನು ಪ್ರಾರಂಭಿಸಬೇಕೆಂದು ಕೇಂದ್ರ ಚುನಾವಣಾ ಆಯೋಗ ನಿರ್ದೇಶಿಸಿದೆ. ಈ ನಿರ್ದೇಶನವನ್ನು ಪಶ್ಚಿಮ ಬಂಗಾಳ ಹೊರತು ಪಡಿಸಿ ದೆಹಲಿ, ಹರಿಯಾಣ, ಮಹಾರಾಷ್ಟ್ರ, ನಾಗಾಲ್ಯಾಂಡ್, ಆಂಧ್ರಪ್ರದೇಶ, ತೆಲಂಗಾಣ ಮತ್ತು ಜಾರ್ಖಂಡ್ ಸೇರಿದಂತೆ 7 ರಾಜ್ಯಗಳಿಗೆ ಹೊರಡಿಸಲಾಗಿದೆ.

ತಪ್ಪಾಗಿ 'ಎಎಸ್ಡಿಡಿ' ಪಟ್ಟಿಗೆ ಸೇರಿಸಿ ಮತದಾರರ ಪಟ್ಟಿಯಿಂದ ಹೆಸರು ತೆಗೆದುಹಾಕಲಾದ ಜನರಿಗೆ, ಎಸ್ಐಆರ್ ಪ್ರಕ್ರಿಯೆ ಇನ್ನೂ ಪೂರ್ಣಗೊಳ್ಳದ 7 ರಾಜ್ಯಗಳಲ್ಲಿ ಚುನಾವಣಾ ಆಯೋಗವು ಎರಡನೇ ಅವಕಾಶ ನೀಡಿದೆ. ಸುಪ್ರೀಂ ಕೋರ್ಟ್ ನೀಡಿದ ಮೌಖಿಕ ಸಲಹೆಯ ಮೇರೆಗೆ ಚುನಾವಣಾ ಆಯೋಗವು ಈ ನಿರ್ಧಾರ ತೆಗೆದುಕೊಂಡಿದೆ.
ಆಯೋಗದ ನಿರ್ದೇಶದ ಅನುಸಾರ, ಪಟ್ಟಿಯಿಂದ ಹೆಸರುಗಳನ್ನು ತೆಗೆದುಹಾಕಲಾದ ಮತದಾರರ ಮನೆಗಳಿಗೆ ಬಿಎಲ್ಒಗಳು ಭೇಟಿ ನೀಡಿ, ಅವರು ನಿಜವಾಗಿಯೂ ಒಂದೇ ವಿಳಾಸದಲ್ಲಿ ವಾಸಿಸುತ್ತಿದ್ದಾರೆಯೇ ಎಂದು ಪರಿಶೀಲಿಸಬೇಕಿದೆ. ಮತದಾರರು ತಮ್ಮ ಹೆಸರುಗಳನ್ನು ಪರಿಶೀಲಿಸಲು ಮತ್ತು ಅವರನ್ನು ಮತ್ತೆ ಸೇರಿಸಲು ಸಾಧ್ಯವಾಗುವಂತೆ ಮತದಾರರ ಪಟ್ಟಿಯನ್ನು ಆಯಾ ಮತಗಟ್ಟೆಗಳಲ್ಲಿ ಪ್ರದರ್ಶಿಸಬೇಕೆಂದು ಆಯೋಗವು ಸೂಚಿಸಿದೆ. ಇದಕ್ಕಾಗಿ ಆಯೋಗವು ಒಂದು ಫಾರ್ಮ್ ಅನ್ನು ಸಹ ನೀಡಿದೆ.
ದೆಹಲಿ, ಮಹಾರಾಷ್ಟ್ರ, ಹರಿಯಾಣ, ಆಂಧ್ರಪ್ರದೇಶ, ಜಾರ್ಖಂಡ್, ತೆಲಂಗಾಣ ಮತ್ತು ನಾಗಾಲ್ಯಾಂಡ್ ರಾಜ್ಯಗಳ ಮುಖ್ಯ ಚುನಾವಣಾ ಅಧಿಕಾರಿಗಳಿಗೆ ಆಯೋಗವು ಪತ್ರ ಬರೆದಿದ್ದು, ತಪ್ಪಾಗಿ ಹೆಸರು ತೆಗೆದುಹಾಕಲಾಗಿರುವ ಮತದಾರರಿಗೆ 'ಅಂತಿಮ ಮತದಾರರ ಪಟ್ಟಿ'ಯಲ್ಲಿ ಹೆಸರು ಸೇರಿಸಲು ಹೊಸ ಇನ್ಯೂಮರೇಷನ್ ಫಾರ್ಮ್ಗಳನ್ನು ನೀಡುವಂತೆ ಸೂಚಿಸಿದೆ.
ಬಂಗಾಳದಂತಹ ಎಸ್ಐಆರ್ ಮುಕ್ತಾಯಗೊಂಡ ರಾಜ್ಯಗಳಲ್ಲಿ ಈ ಅವಕಾಶ ಸಿಗುವುದಿಲ್ಲ. ಅಲ್ಲಿನ ಮತದಾರರು ತಮ್ಮ ಹೆಸರು ಮರುಸೇರ್ಪಡೆಗೊಳಿಸಲು ನಿರಂತರ ನವೀಕರಣ ಪ್ರಕ್ರಿಯೆಯ ಅಡಿಯಲ್ಲಿ ಫಾರ್ಮ್ 6 ಅರ್ಜಿಯನ್ನೇ ಸಲ್ಲಿಸಬೇಕಾಗುತ್ತದೆ.
ಬಂಗಾಳದಲ್ಲಿ 'ಎಎಸ್ಡಿಡಿ' ಎಂದು ಗುರುತಿಸಲಾದ ಬಹುತೇಕ ಮತದಾರರು ಕೆಲಸದ ನಿಮಿತ್ತ ಬೇರೆ ರಾಜ್ಯಗಳಿಗೆ ಅಥವಾ ಹೊಸ ವಿಳಾಸಕ್ಕೆ ತೆರಳಿದ್ದರು. ಅರಿವಿನ ಕೊರತೆ ಅಥವಾ ಸಂಪನ್ಮೂಲಗಳ ಕೊರತೆಯಿಂದಾಗಿ ಅವರು ವಿಳಾಸ ಬದಲಾವಣೆಯನ್ನು ಚುನಾವಣಾ ಆಯೋಗಕ್ಕೆ ತಿಳಿಸಲು ಸಾಧ್ಯವಾಗಿರಲಿಲ್ಲ ಎಂದು ಹಕ್ಕುಗಳ ಹೋರಾಟಗಾರರು ತಿಳಿಸಿದ್ದಾರೆ. "ಒಂದೇ ದೇಶ, ಒಂದೇ ನಿಯಮ ಎಂದಾದರೆ ಬಂಗಾಳವನ್ನು ಮಾತ್ರ ಏಕೆ ಬೇರೆಯಾಗಿ ನೋಡಲಾಗುತ್ತಿದೆ?" ಎಂಬ ಪ್ರಶ್ನೆ ಕೇಳಿಬಂದಿದೆ.
ಆಯೋಗದ ಸೂಚನೆಯಂತೆ ಫಾರ್ಮ್ ಭರ್ತಿ ಮಾಡುವುದು ಹೇಗೆ?
* ಬಿಎಲ್ಒ ಮೂಲಕ ನೇರವಾಗಿ ಅಥವಾ ಎಲೆಕ್ಟ್ರಾನಿಕ್ ಮಾಧ್ಯಮಗಳ ಮೂಲಕ ಅರ್ಹ ಮತದಾರರಿಗೆ ಇನ್ಯೂಮರೇಷನ್ ಫಾರ್ಮ್ಗಳನ್ನು ತಲುಪಿಸಲಾಗುತ್ತದೆ.
* ಮತದಾರರು ತಮ್ಮ ಹಳೆಯ ಎಪಿಕ್ ಸಂಖ್ಯೆಯನ್ನು ಬಳಸಿ ವೆಬ್ಸೈಟ್ ಅಥವಾ ECINET ಆ್ಯಪ್ ಮೂಲಕವೂ ಈ ಫಾರ್ಮ್ ಡೌನ್ಲೋಡ್ ಅಥವಾ ಭರ್ತಿ ಮಾಡಬಹುದು.
* ಈ ಫಾರ್ಮ್ನೊಂದಿಗೆ "ಅನೆಕ್ಸರ್-ಬಿ" ಸಲ್ಲಿಸಬೇಕಾಗಿದ್ದು, ಅದರಲ್ಲಿ ಹಿಂದೆ ಫಾರ್ಮ್ ಸಲ್ಲಿಸಲು ಏಕೆ ಸಾಧ್ಯವಾಗಲಿಲ್ಲ ಎಂಬ ಕಾರಣವನ್ನು ತಿಳಿಸಬೇಕಾಗುತ್ತದೆ.
* ಈಗಾಗಲೇ ಎಸ್ಐಆರ್ ಸಮಯದಲ್ಲಿ ಫಾರ್ಮ್ 6 ಸಲ್ಲಿಸಿದವರು ಮತ್ತೆ ಈ ಇನ್ಯೂಮರೇಷನ್ ಫಾರ್ಮ್ ಸಲ್ಲಿಸುವ ಅಗತ್ಯವಿಲ್ಲ.
ದೆಹಲಿಯಲ್ಲಿ ಕೇವಲ ಶೇ. 67.22 ರಷ್ಟು ಎಸ್ಐಆರ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ಸುಮಾರು 47.57 ಲಕ್ಷ ಹೆಸರುಗಳು ಕರಡು ಪಟ್ಟಿಯಿಂದ ಹೊರಬಿದ್ದಿದ್ದವು. ಇದೀಗ ದೆಹಲಿ ಸಿಇಒ ಆಡಳಿತವು ವಜಾಗೊಂಡ ಮತದಾರರ ಪುನರ್ ಪರಿಶೀಲನೆ ಮತ್ತು ಮರುಸೇರ್ಪಡೆಗಾಗಿ ವಿಶೇಷ ಶಿಬಿರಗಳನ್ನು ಆಯೋಜಿಸುತ್ತಿದೆ.