ಬೆಂಗಳೂರು, ಜ 04 ( Dajiworld News/MB) : "ತಾನು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಮಠ ಮಂದಿರಗಳನ್ನು ನಿಯಂತ್ರಿಸಲು ಹಾಗೂ ಸ್ವಾಮೀಜಿಗಳನ್ನು ಬಂಧಿಸಲು ಮುಂದಾಗಿದ್ದ ವಿಚಾರವಾದಿಗೆ ಪ್ರಧಾನಿ ಮೋದಿಯವರು ಮಠದಲ್ಲಿ ಮಾಡಿದ ಭಾಷಣವನ್ನು ಟೀಕಿಸುವ ನೈತಿಕತೆ ಇದೆಯೇ ಎಂದು" ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಿಜೆಪಿ ಮುಖಂಡ ಮುನಿರಾಜು ಅವರ ಮನೆಯ ಆವರಣದಲ್ಲಿ ಆಯೋಜಿಸಿದ್ದ ಬಿಜೆಪಿ ಕಾರ್ಯಕರ್ತರ ಸಭೆ ಹಾಗೂ ಮಂಡಲದ ಅಧ್ಯಕ್ಷರ ಅಭಿನಂದನಾ ಸಮಾರಂಭದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಸಿದ್ಧರಾಮಯ್ಯ ಅವರು ಮಠ-ಮಂದಿರಗಳ ಮೇಲೆ ನಂಬಿಕೆ ಹೊಂದಿಲ್ಲ. ಅವರಿಗೆ ರಾಜಕೀಯ ಯಾವುದು, ಧರ್ಮ ಯಾವುದು ಎಂಬುದು ತಿಳಿದಿಲ್ಲ. ಅವರು ತಮ್ಮ ಆಡಳಿತಾವಧಿಯಲ್ಲಿ ಮಠಗಳಿಗೆ ಏನು ತೊಂದರೆ ನೀಡಿದ್ದಾರೆ ಎಂದು ಜನರಿಗೆ ಗೊತ್ತಿದೆ" ಎಂದು ಹೇಳಿದರು.
"ಪ್ರಧಾನಿಯವರು ಈಗಾಗಲೇ ರಾಜ್ಯಕ್ಕೆ ನೀಡಬೇಕಾದ ಅನುದಾನವನ್ನು ನೀಡಿದ್ದಾರೆ. ರಾಜ್ಯದಲ್ಲಿ ಆದ ಭೀಕರ ನೆರೆಗೆ ವಿಶೇಷ ಪರಿಹಾರವನ್ನು ನೀಡುವಂತೆ ಮುಖ್ಯಮಂತ್ರಿ ಕೋರಿದ್ದಾರೆ" ಎಂದು ಹೇಳಿದರು.
"ವಯಸ್ಸಿನ ಆಧಾರದಲ್ಲಿ ಲೋಕೇಶ್ ಅವರನ್ನು ಮಂಡಲದ ಅಧ್ಯಕ್ಷರನ್ನಾಗಿ ಮಾಡಿಲ್ಲ. ಅವರಿಗೆ ಪಕ್ಷದಲ್ಲಿರುವ ನಿಷ್ಠೆ ಹಾಗೂ ಪಕ್ಷಕ್ಕಾಗಿ ಅವರು ದುಡಿದಿರುವುದನ್ನು ಪರಿಗಣನೆ ಮಾಡಲಾಗಿದೆ. ಜೊತೆಗೆ ಪಾರದರ್ಶಕವಾಠಗಿ ಚುನಾಚವಣಾ ಪ್ರಕ್ರಿಯೆಯನ್ನು ನಡೆಸಲಾಗಿದೆ. ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ" ಎಂದು ಸ್ಪಷ್ಟನೆ ನೀಡಿದರು.