ಜಾಮ್ನಗರ, ನ.07 (DaijiworldNews/TA): ನಡೆಯಲೂ ಆಗದೆ, ನಿಲ್ಲಲೂ ಆಗದೆ ತೀವ್ರ ನೋವಿನಿಂದ ಬಳಲುತ್ತಿದ್ದ ಕೇರಳದ ಅನಾಥ ಆನೆಮರಿ ‘ಮಾಯಾ’ಗೆ ಇದೀಗ ಹೊಸ ಬದುಕಿನ ನಿರೀಕ್ಷೆ ಮೂಡಿದೆ. ಮೂಳೆಗಳು ದುರ್ಬಲಗೊಂಡು ಗಂಭೀರ ಆರೋಗ್ಯ ಸಮಸ್ಯೆ ಎದುರಿಸುತ್ತಿರುವ ಸುಮಾರು 130 ಕೆ.ಜಿ. ತೂಕದ ಈ ಮರಿಯಾನೆಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಕೇರಳದಿಂದ ಗುಜರಾತ್ನ ಜಾಮ್ನಗರದಲ್ಲಿರುವ ಅನಂತ್ ಅಂಬಾನಿ ಅವರ ವಂತಾರಾ ವನ್ಯಜೀವಿ ಚಿಕಿತ್ಸಾ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ.

ನವೆಂಬರ್ 6ರಂದು ವಿಶೇಷ ವಿಮಾನದ ಮೂಲಕ ಮಾಯಾಳನ್ನು ಜಾಮ್ನಗರಕ್ಕೆ ಕರೆತರಲಾಗಿದ್ದು, ತಜ್ಞ ಪಶುವೈದ್ಯರ ತಂಡ ಆಕೆಯ ಚಿಕಿತ್ಸೆಯ ಜವಾಬ್ದಾರಿ ವಹಿಸಿಕೊಂಡಿದೆ. ಚಿಕಿತ್ಸೆ ಪೂರ್ಣಗೊಂಡ ಬಳಿಕ ಮರಳಿ ಕೇರಳದ ಅಭಯಾರಣ್ಯಕ್ಕೆ ಕಳುಹಿಸುವ ಉದ್ದೇಶವಿದೆ.
ಆನೆಗಳ ಹಿಂಡಿನಿಂದ ಬೇರ್ಪಟ್ಟು ಅನಾಥಳಾಗಿದ್ದ ಮಾಯಾ : 2025ರ ಏಪ್ರಿಲ್ 19ರಂದು ಕೇರಳದ ಮಲೆಯತ್ತೂರು ಅರಣ್ಯ ವಿಭಾಗದ ಕಪ್ರಿಕ್ಕಾಡ್ ಬಳಿ ಆನೆಗಳ ಹಿಂಡೊಂದು ನದಿ ದಾಟುವ ಸಂದರ್ಭದಲ್ಲಿ ನವಜಾತ ಆನೆಮರಿಯನ್ನು ಬಿಟ್ಟು ಮುಂದೆ ಸಾಗಿತ್ತು. ಅರಣ್ಯ ಸಿಬ್ಬಂದಿ ದೀರ್ಘಕಾಲ ಕಾದರೂ ಮರಿಯನ್ನು ಕರೆದುಕೊಂಡು ಹೋಗಲು ತಾಯಿ ಆನೆಯಾಗಲಿ, ಹಿಂಡಿನ ಇತರ ಆನೆಗಳಾಗಲಿ ಮರಳಿ ಬರಲಿಲ್ಲ.
ತೀವ್ರ ನಿರ್ಜಲೀಕರಣದಿಂದ ಬಳಲುತ್ತಿದ್ದ ಮರಿಯನ್ನು ಅರಣ್ಯ ಸಿಬ್ಬಂದಿ ರಕ್ಷಿಸಿ ಅಭಯಾರಣ್ಯಕ್ಕೆ ಕರೆತಂದಿದ್ದರು. ಅಂದಿನಿಂದ ಪಶುವೈದ್ಯ ಡಾ. ಬಿನೋಯ್ ಸಿ. ಬಾಬು, ಆರೈಕೆದಾರ ನಿಖಿಲ್ ಬಾಬು ಸೇರಿದಂತೆ ಸಿಬ್ಬಂದಿ ಕಳೆದ 18 ತಿಂಗಳಿಂದ ಹಗಲು-ರಾತ್ರಿ ಎನ್ನದೆ ತಮ್ಮದೇ ಮಗುವಿನಂತೆ ಆರೈಕೆ ಮಾಡುತ್ತಿದ್ದರು. ಕೈಯಿಂದಲೇ ಹಾಲುಣಿಸಿ ಬೆಳೆಸಿದ ಈ ಮರಿಯಾನೆಗೆ ‘ಮಾಯಾ’ ಎಂದು ಹೆಸರಿಡಲಾಗಿತ್ತು.
2026ರ ಜುಲೈನಲ್ಲಿ ಆಟವಾಡುತ್ತಿದ್ದ ಸಂದರ್ಭದಲ್ಲಿ ಮಾಯಾ ಬಿದ್ದು ಭುಜಕ್ಕೆ ಗಾಯ ಮಾಡಿಕೊಂಡಿದ್ದಳು. ಆರಂಭದಲ್ಲಿ ಸಾಮಾನ್ಯ ಗಾಯದಂತೆ ಕಂಡಿದ್ದರೂ, ದಿನ ಕಳೆದಂತೆ ಆಕೆಯ ಆರೋಗ್ಯ ಸ್ಥಿತಿ ಹದಗೆಡತೊಡಗಿತು. ಮೂಳೆಗಳು ತೀವ್ರವಾಗಿ ದುರ್ಬಲಗೊಂಡು, ಅಕ್ಟೋಬರ್ ವೇಳೆಗೆ ಕಾಲುಗಳಲ್ಲಿಯೂ ಮುರಿತ ಕಾಣಿಸಿಕೊಂಡಿತ್ತು. ಪರಿಣಾಮವಾಗಿ ಮಾಯಾಗೆ ಸ್ವತಃ ನಿಲ್ಲುವುದಿರಲಿ, ನಡೆಯುವುದೂ ಅಸಾಧ್ಯವಾಯಿತು. ಆಹಾರ ಸೇವನೆಯೂ ಕಷ್ಟವಾಗಿ ದ್ರವ ಆಹಾರದ ಮೇಲೆಯೇ ಬದುಕುವ ಸ್ಥಿತಿ ನಿರ್ಮಾಣವಾಗಿತ್ತು. ಆಕೆಯ ಆರೋಗ್ಯ ಸ್ಥಿತಿ ಗಂಭೀರವಾಗಿದ್ದ ಹಿನ್ನೆಲೆಯಲ್ಲಿ ಅಕ್ಟೋಬರ್ 29ರಂದು ವೈದ್ಯಕೀಯ ಮಂಡಳಿ ದಯಾಮರಣ ನೀಡುವಂತೆ ಶಿಫಾರಸು ಮಾಡಿತ್ತು. ಇದು ಮಾಯಾಳನ್ನು ಆರೈಕೆ ಮಾಡುತ್ತಿದ್ದ ಸಿಬ್ಬಂದಿಗೂ ತೀವ್ರ ಆಘಾತ ಉಂಟುಮಾಡಿತ್ತು.
ದಯಾಮರಣದ ನಿರ್ಧಾರಕ್ಕೂ ಮುನ್ನ ಕೇರಳದ ಮುಖ್ಯ ವನ್ಯಜೀವಿ ವಾರ್ಡನ್ ಡಾ. ಪಿ. ಪುಗಳೇಂದಿ ಅವರು ತಜ್ಞರ ಸಲಹೆ ಪಡೆಯಲು ಮುಂದಾದರು. ಅಸ್ಸಾಂನ ಪ್ರಸಿದ್ಧ ಆನೆ ತಜ್ಞ ಡಾ. ಕುಶಲ್ ಕೊನ್ವಾರ್ ಶರ್ಮಾ ಅವರು ಮಾಯಾಳ ಆರೋಗ್ಯ ಸಮಸ್ಯೆಯು ಪ್ಯಾರಾಥೈರಾಯ್ಡ್ ಗ್ರಂಥಿಗೆ ಸಂಬಂಧಿಸಿರಬಹುದು ಎಂಬ ಶಂಕೆ ವ್ಯಕ್ತಪಡಿಸಿ, ಹೆಚ್ಚಿನ ಚಿಕಿತ್ಸೆಗೆ ವಂತಾರಾಗೆ ಕಳುಹಿಸುವಂತೆ ಸಲಹೆ ನೀಡಿದರು. ಇದರ ಬೆನ್ನಲ್ಲೇ ಅನಂತ್ ಅಂಬಾನಿ ಅವರ ವಂತಾರಾ ಸಂಸ್ಥೆ ಮಾಯಾಳ ಚಿಕಿತ್ಸೆಗೆ ನೆರವಾಗಲು ಮುಂದೆ ಬಂತು. ಆಕೆಯನ್ನು ಸುರಕ್ಷಿತವಾಗಿ ಜಾಮ್ನಗರಕ್ಕೆ ಸ್ಥಳಾಂತರಿಸಲು ವಿಶೇಷ ವ್ಯವಸ್ಥೆ ಮಾಡಲಾಯಿತು.
ನವೆಂಬರ್ 6ರಂದು ಜೀವ ರಕ್ಷಕ ಉಪಕರಣಗಳು, ಅಗತ್ಯ ವೈದ್ಯಕೀಯ ವ್ಯವಸ್ಥೆಗಳು ಹಾಗೂ ಪಶುವೈದ್ಯರ ವಿಶೇಷ ತಂಡದೊಂದಿಗೆ ಮಾಯಾಳನ್ನು ವಿಶೇಷ ವಿಮಾನದ ಮೂಲಕ ಜಾಮ್ನಗರಕ್ಕೆ ಕರೆತರಲಾಯಿತು. ಇದೀಗ ವಂತಾರಾದ ತಜ್ಞ ವೈದ್ಯರು ಮಾಯಾಳ ಆರೋಗ್ಯ ಸ್ಥಿತಿಯನ್ನು ಪರಿಶೀಲಿಸಿ ಮುಂದಿನ ಚಿಕಿತ್ಸೆಯನ್ನು ಆರಂಭಿಸಲಿದ್ದಾರೆ. ಚಿಕಿತ್ಸೆಗೆ ಸ್ಪಂದಿಸಿ ಮಾಯಾ ಮತ್ತೆ ತನ್ನ ಕಾಲ ಮೇಲೆ ನಿಂತು ನಡೆಯುವಂತಾಗಲಿ ಎಂಬ ನಿರೀಕ್ಷೆ ಎಲ್ಲರಲ್ಲಿದೆ.