ತೆಲಂಗಾಣ, ಜ.04 (Daijiworld News/PY) : ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ ಪಶು ವೈದ್ಯೆಯ ಮೇಲಿನ ಅತ್ಯಾಚಾರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆಂಧ್ರಪ್ರದೇಶ ಸರ್ಕಾರ ಹೊಸ ಕಾಯ್ದೆ ಜಾರಿಗೆ ತಂದಿದ್ದು, ದಿಶಾ ಕಾಯ್ದೆಯ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಇಬ್ಬರು ಮಹಿಳಾ ವಿಶೇಷ ಅಧಿಕಾರಿಗಳನ್ನು ನೇಮಕಗೊಳಿಸಿದೆ.
ಡಿಸೆಂಬರ್ 13ರಂದು ಆಂಧ್ರ ಪ್ರದೇಶ ಸರ್ಕಾರವು ದಿಶಾ ಕಾಯ್ದೆಯನ್ನು ಅಂಗೀಕರಿಸಿತ್ತು. ತೆಲಂಗಾಣದಲ್ಲಿ ನಡೆದ ಪಶು ವೈದ್ಯೆ ಅತ್ಯಾಚಾರ ಹತ್ಯೆ ಪ್ರಕರಣ ನಡೆದ ಎರಡು ವಾರಗಳಲ್ಲೇ ಈ ಕಾಯ್ದೆಯನ್ನು ಜಾರಿಗೆ ತಂದಿದ್ದಾರೆ.
ಮಹಿಳೆಯರು ಮತ್ತು ಮಕ್ಕಳ ಮೇಲಿನ ಅಪರಾಧಗಳಲ್ಲಿ ತಪ್ಪಿತಸ್ಥರಿಗೆ 21 ದಿನಗೊಳಗೆ ಮರಣದಂಡನೆ ಅಥವಾ ಕಠಿಣ ಶಿಕ್ಷೆಯನ್ನು ಜಾರಿಗೊಳಿಸಲು ಆಂಧ್ರಪ್ರದೇಶ ಸರ್ಕಾರ ಈ ನೇಮಕ ಮಾಡಿದೆ.
ಈ ಕಾಯ್ದೆಗೆ ರಾಜ್ಯ ಸರ್ಕಾರ ಇಬ್ಬರು ಖಡಕ್ ಅಧಿಕಾರಿಗಳನ್ನ ನೇಮಕ ಮಾಡಿ ಆದೇಶ ಹೊರಡಿಸಿದ್ದು, ಮಹಿಳಾ ಅಭಿವೃದ್ಧಿ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಡೈರೆಕ್ಟರ್ ಡಾ. ಕೃತಿಕಾ ಶುಕ್ಲಾ (ಐಎಎಸ್) ಹಾಗೂ ಐಪಿಎಸ್ ಅಧಿಕಾರಿ ಎಂ ದೀಪಿಕಾ ಅವರನ್ನ ಈ ಕಾಯ್ದೆಯ ವಿಶೇಷ ಅಧಿಕಾರಿಗಳಾಗಿ ನೇಮಕ ಮಾಡಿ ಆದೇಶ ಹೊರಡಿಸಿದೆ.