ಮೈಸೂರು, ನ.07 (DaijiworldNews/AA): ಮಹಾರಾಜರು ಅರಮನೆ ಕಟ್ಟಿಸಿದ್ದು ಕೂಡ ಜನರ ತೆರಿಗೆಯ ಹಣದಿಂದಲೇ, ಹೀಗಾಗಿ ಎಲ್ಲವೂ ಜನರಿಗೇ ಸೇರಬೇಕು ಎಂದು ಸಚಿವ ಯತೀಂದ್ರ ಸಿದ್ದರಾಮಯ್ಯ ಅವರು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಅರಮನೆ ಖಾಸಗಿ ಸ್ವತ್ತು, ಸರ್ಕಾರ ಕಟ್ಟಿಸಿಲ್ಲ ಎನ್ನುವ ಪ್ರಮೋದಾ ದೇವಿ ಒಡೆಯರ್ ಅವರ ಹೇಳಿಕೆ ವಿಚಾರವಾಗಿ ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಪ್ರತಿಕ್ರಿಯೆ ನೀಡಿದ ಅವರು, "ನಾನು ಸಿಂಹಾಸನ ಅಂಬಾರಿ ಸರ್ಕಾರದ್ದು ಅಂತಾ ಎಲ್ಲಿಯೂ ಹೇಳಿಲ್ಲ. ನಾವು ಬಾಡಿಗೆ ಕೊಡುತ್ತೇವೆ ಎಂದು ಹೇಳಿದೆ. ಅವರು ಅದನ್ನ ಗೌರವಧನ ಅಂದಿದ್ದಾರೆ. ಇದರಲ್ಲಿ ಅಂತಹ ವ್ಯತ್ಯಾಸವೇನು ಇಲ್ಲ. ಅರಮನೆ ಕಟ್ಟಿಸಿದ್ದು ಮಹರಾಜರೇ, ಮಹಾರಾಜರು ಕಟ್ಟಿಸಿಲ್ಲ ಎಂದು ನಾನು ಹೇಳಿಲ್ಲ. ಆದರೆ ಅರಮನೆ ಕಟ್ಟಿಸಿದ್ದು ಕೂಡ ಜನರ ತೆರಿಗೆಯ ಹಣದಿಂದಲೇ. ಹೀಗಾಗಿ ಎಲ್ಲವೂ ಜನರಿಗೇ ಸೇರಬೇಕು" ಎಂದು ಸಮರ್ಥಿಸಿಕೊಂಡರು.
"ಸರ್ಕಾರವಾಗಲಿ, ರಾಜಾಡಳಿತವಾಗಲಿ ಜನರ ತರಿಗೆಯಿಂದಲೇ ನಡೆಯುವುದು. ಹೀಗಾಗಿ ಎಲ್ಲವೂ ಜನರಿಗೆ ಸೇರಿದ್ದು. ಪ್ರತಿ ವರ್ಷವೂ ರಾಜಮನೆತನದವರು ಸಹಕಾರ ಕೊಟ್ಟಿದ್ದಾರೆ. ಈ ವರ್ಷ ಒಂದಿಷ್ಟು ಗೊಂದಲ ಆಗಿದೆ. ಮುಂದಿನ ದಿನಗಳಲ್ಲಿ ಅವರು ಸಿಎಂ ಜೊತೆ ಮಾತನಾಡಿ, ಎಲ್ಲಾ ಗೊಂದಲ ಬಗೆಹರಿಸಿಕೊಳ್ಳುತ್ತಾರೆ" ಎಂದು ತಿಳಿಸಿದರು.
ಅರಮನೆಯಲ್ಲಿ ಜಟ್ಟಿ ಕಾಳಗ ರದ್ದು ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, "ಅಧಿಕಾರಿಗಳಿಂದ ವರದಿ ಕೇಳಿದ್ದೇನೆ. ಈಗಾಗಲೇ ಕೆಲವರ ಮೇಲೆ ಕರ್ತವ್ಯ ಲೋಪದ ದೂರುಗಳು ಬಂದಿವೆ. ಅಧಿಕಾರಿಗಳ ವರದಿ ಸಂಪೂರ್ಣವಾಗಿ ಬರಲಿ. ವರದಿ ಬಂದ ಮೇಲೆ ಯಾರೇ ತಪ್ಪು ಮಾಡಿದ್ರು ಕ್ರಮ ಕೈಗೊಳ್ಳುತ್ತೇನೆ" ಎಂದರು.