ನವದೆಹಲಿ, ನ.07 (DaijiworldNews/AK): ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ ರಾಜ್ಯಗಳಿಗೆ ಕೇಂದ್ರ ಸರ್ಕಾರವು ‘ಭಾರತ್ ರೈಸ್’ ಅನ್ನು ಹೆಚ್ಚುವರಿ ಹಂಚಿಕೆ ಮಾಡಿದ್ದು, ಜತೆಗೆ ಮೂರು ತಿಂಗಳ ಕಾಲ ಅಕ್ಕಿ ಮತ್ತು ಭತ್ತದ ದಾಸ್ತಾನು ಮಿತಿ ವಿಧಿಸಲು ರಾಜ್ಯಗಳಿಗೆ ಅನುಮತಿ ಸಹ ನೀಡಿದೆ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ್ ಜೋಶಿ ಮಾಹಿತಿ ನೀಡಿದ್ದಾರೆ.

ಅಗತ್ಯವಿರುವ ಕಡೆ 2027ರ ಜನವರಿ 31ರ ವರೆಗೆ ಅಕ್ಕಿ ಮತ್ತು ಭತ್ತದ ಮೇಲೆ ದಾಸ್ತಾನು ಮಿತಿ ವಿಧಿಸಲು ದಕ್ಷಿಣದ 5 ರಾಜ್ಯಗಳಿಗೆ ಅನುಮತಿ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ. ಕೇಂದ್ರ ಸರ್ಕಾರ ಆಹಾರ ಧಾನ್ಯಗಳ, ವಿಶೇಷವಾಗಿ ಅಕ್ಕಿ ಬೆಲೆಯನ್ನು ಅತಿ ಸೂಕ್ಷ್ಮವಾಗಿ ಗಮನಿಸುತ್ತಿದ್ದು, ದೇಶೀಯವಾಗಿ ಸಾಕಷ್ಟು ಪೂರೈಕೆ ಇರುವಿಕೆ ಮತ್ತು ಬೆಲೆ ಸ್ಥಿರತೆ ಕಾಯ್ದುಕೊಳ್ಳಲು, ಅಕ್ರಮ ದಾಸ್ತಾನು ತಡೆಯಲು ಮತ್ತು ಗ್ರಾಹಕರ ಹಿತಾಸಕ್ತಿ ರಕ್ಷಣೆಗಾಗಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿದೆ ಎಂದು ಅವರು ಹೇಳಿದ್ದಾರೆ.
ದೇಶಾದ್ಯಂತ ಅದರಲ್ಲೂ ವಿಶೇಷವಾಗಿ ದಕ್ಷಿಣ ರಾಜ್ಯಗಳಲ್ಲಿ ಅಕ್ಕಿ ಲಭ್ಯತೆ ಹೆಚ್ಚಿಸಲು NAFED, NCCF ಮತ್ತು ಕೇಂದ್ರೀಯ ಭಂಡಾರ್ಗೆ ‘ಭಾರತ್ ರೈಸ್’ ಅನ್ನು ಹೆಚ್ಚುವರಿಯಾಗಿ ಹಂಚಿಕೆ ಮಾಡಲಾಗಿದೆ. ಅಲ್ಲದೆ, ಗ್ರಾಹಕರಿಗೆ ಸುಲಭವಾಗಿ ಭಾರತ್ ಅಕ್ಕಿ ಕೈ ಸೇರುವಂತೆ ಮಾಡಲು ಹಾಗೂ ವಿತರಣಾ ವ್ಯವಸ್ಥೆ ವಿಸ್ತರಿಸಲು ಈ ಮೂರೂ ಸಂಸ್ಥೆಗಳಿಗೆ ಸೂಚನೆ ಸಹ ನೀಡಲಾಗಿದೆ ಎಂದು ಸಚಿವರು ಹೇಳಿದ್ದಾರೆ.
2026-27ನೇ ಸಾಲಿಗೆ ಮುಕ್ತ ಮಾರುಕಟ್ಟೆ ಮಾರಾಟ ಯೋಜನೆ ಅಡಿಯಲ್ಲಿ ಅಕ್ಕಿ ಮಾರಾಟದ ಗುರಿಯನ್ನು ಕೇಂದ್ರ ಸರ್ಕಾರ ದ್ವಿಗುಣಗೊಳಿಸಿದೆ. 25 ಲಕ್ಷ ಮೆಟ್ರಿಕ್ ಟನ್ ಇದ್ದುದನ್ನು ಇದೀಗ 50 LMT ಗೆ ಹೆಚ್ಚಿಸಿದೆ. 2026ರ ಅಕ್ಟೋಬರ್ 31ರವರೆಗೆ ಇ-ಹರಾಜಿನ ಮೂಲಕ ಈಗಾಗಲೇ 25 LMT ಅಕ್ಕಿ ಮಾರಾಟ ಮಾಡಲಾಗಿದೆ ಎಂದು ಸಚಿವ ಜೋಶಿ ಸ್ಪಷ್ಟಪಡಿಸಿದ್ದಾರೆ.
ದೇಶಾದ್ಯಂತ ಅಕ್ಕಿ ಮತ್ತು ಭತ್ತ ಸಂಗ್ರಹಿಸಿಡುವ ಎಲ್ಲಾ ಸಂಸ್ಥೆಗಳಿಗೆ ದಾಸ್ತಾನು ವಿವರ ಸಲ್ಲಿಕೆ ಕಡ್ಡಾಯಗೊಳಿಸಿದ್ದು, ಪ್ರತಿ ಶುಕ್ರವಾರ ದಾಸ್ತಾನು ಪ್ರಮಾಣವನ್ನು ನವೀಕರಿಸಲು ಸೂಚಿಸಿದೆ. ಈ ಸಂಬಂಧ ನವೆಂಬರ್ 6ರಂದು ಆದೇಶ ಸಹ ಹೊರಡಿಸಲಾಗಿದೆ ಎಂದು ತಿಳಿಸಿದ್ದಾರೆ. ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿರುವ ವ್ಯಾಪಾರಿಗಳು/ಸಗಟು ವ್ಯಾಪಾರಿಗಳು, ಚಿಲ್ಲರೆ ವ್ಯಾಪಾರಿಗಳು, ದೊಡ್ಡ ಚಿಲ್ಲರೆ ಸರಪಳಿ ಸಂಸ್ಥೆಗಳು ಹಾಗೂ ಸಂಸ್ಕರಣಾ ಘಟಕಗಳು/ಅಕ್ಕಿ ಗಿರಣಿದಾರರು ತಮ್ಮ ಬಳಿ ಇರುವ ಅಕ್ಕಿ ಮತ್ತು ಭತ್ತದ ದಾಸ್ತಾನಿನ ವಿವರಗಳನ್ನು ಆರು ವರ್ಗಗಳ ಅಡಿಯಲ್ಲಿ ಘೋಷಿಸಲು ಆದೇಶಿಸಿದ್ದಾಗಿ ತಿಳಿಸಿದ್ದಾರೆ.
ಬಾಸುಮತಿ ಅಕ್ಕಿ, ಬಾಸುಮತಿ ಅಲ್ಲದ ಪ್ರೀಮಿಯಂ ಅಕ್ಕಿ, ಬಾಸುಮತಿ ಅಲ್ಲದ ಅಕ್ಕಿ, ಬೇಯಿಸಿದ ಅಕ್ಕಿ, ನುಚ್ಚಕ್ಕಿ ಮತ್ತು ಭತ್ತದ ದಾಸ್ತಾನು ಮಾಹಿತಿ ನೀಡುತ್ತಿರಬೇಕು. ಅಕ್ಕಿ ಮತ್ತು ಭತ್ತ ಸಂಗ್ರಹಿಸಿಡುವ ಎಲ್ಲಾ ಸಂಸ್ಥೆಗಳು ಪ್ರತಿ ಶುಕ್ರವಾರ ‘ಫುಡ್ ಸ್ಟಾಕ್ ಪೋರ್ಟಲ್’ https://foodstock.dfpd.gov.inನಲ್ಲಿ ದಾಸ್ತಾನು ವಿವರವನ್ನು ಕಡ್ಡಾಯವಾಗಿ ಬಹಿರಂಗಪಡಿಸಬೇಕು. ಈ ಮಾಹಿತಿ ನಿಖರವಾಗಿದೆಯೇ ಮತ್ತು ನಿಯಮಿತವಾಗಿ ನವೀಕರಿಸಲಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ಪೋರ್ಟಲ್ನಲ್ಲಿ ನೋಂದಾಯಿಸಿಕೊಳ್ಳದಿದ್ದರೆ ಅಥವಾ ನಿಗದಿಪಡಿಸಿದ ದಾಸ್ತಾನು ಮಿತಿ ಉಲ್ಲಂಘಿಸಿದರೆ ಅಂತಹ ಸಂಸ್ಥೆಗಳ ವಿರುದ್ಧ ‘ಅಗತ್ಯ ಸರಕುಗಳ ಕಾಯಿದೆ, 1955’ರ ಸೆಕ್ಷನ್ 6 ಮತ್ತು 7ರಡಿ ಸೂಕ್ತ ದಂಡ ವಿಧಿಸಿ ಕ್ರಮ ಕೈಗೊಳ್ಳಲಾಗುವುದು ಎಂದೂ ಸಚಿವರು ಎಚ್ಚರಿಕೆ ನೀಡಿದ್ದಾರೆ.