ಗಾಜಿಯಾಬಾದ್, ನ.07 (DaijiworldNews/AA): ಉತ್ತರ ಪ್ರದೇಶದ ಗಾಜಿಯಾಬಾದ್ ಪೊಲೀಸ್ ಹೊರಠಾಣೆಯೊಂದರಲ್ಲಿ ನಡೆದ ಸ್ಫೋಟದ ಹೊಣೆಯನ್ನು 'ತೆಹ್ರೀಕ್-ಉಲ್-ಮುಜಾಹಿದ್ದೀನ್' ಉಗ್ರ ಸಂಘಟನೆಯೊಂದು ಹೊತ್ತುಕೊಂಡಿದ್ದು, ಈ ಕುರಿತ ತನಿಖೆ ಶುರುವಾಗಿದೆ.

ಶುಕ್ರವಾರ ರಾತ್ರಿ 9 ಗಂಟೆ ಸುಮಾರಿಗೆ ವಸುಂಧರಾ ಪೊಲೀಸ್ ಹೊರಠಾಣೆಯಲ್ಲಿ ಈ ಸ್ಫೋಟ ಸಂಭವಿಸಿದೆ. ಸ್ಫೋಟದ ತೀವ್ರತೆಗೆ ಅಲ್ಲಿನ ಎರಡು ಗಾಜಿನ ಕಿಟಕಿಗಳು ಪುಡಿಪುಡಿಯಾಗಿವೆ. ಈ ಘಟನೆಯಲ್ಲಿ ಆಹಾರ ವಿತರಣಾ ಸಿಬ್ಬಂದಿಯೊಬ್ಬರು ಗಾಯಗೊಂಡಿರುತ್ತಾರೆ.
ಈ ದಾಳಿಯ ಬಳಿಕ 'ತೆಹ್ರೀಕ್-ಎ-ಮುಜಾಹಿದ್ದೀನ್-ಎ-ಹಿಂದೂಸ್ತಾನ್' ಎಂದು ಕರೆದುಕೊಳ್ಳುವ ಉಗ್ರರ ಗುಂಪೊಂದು ಸಾಮಾಜಿಕ ಜಾಲತಾಣದ ಪೋಸ್ಟ್ ಒಂದರ ಮೂಲಕ ಹೊಣೆ ಹೊತ್ತುಕೊಂಡಿದೆ. 'ಕೇಸರಿ ಸರ್ಕಾರದ ವಿರುದ್ಧದ ಕ್ರಮವಾಗಿ ಪೊಲೀಸರನ್ನು ಗುರಿಯಾಗಿಸಿಕೊಂಡು ಈ ದಾಳಿ ನಡೆಸಲಾಗಿದೆ. ತಮ್ಮ ಮನೆ, ಮಸೀದಿ, ನಂಬಿಕೆ ಮತ್ತು ಸಂಸ್ಕೃತಿಯ ರಕ್ಷಣೆಗಾಗಿ ಹೋರಾಡುವ ಹಕ್ಕು ತಮಗಿದೆ ಎಂದು ಪ್ರತಿಪಾದಿಸಿರುವ ಆ ಗುಂಪು, ಈಗಿರುವುದು ಅಕ್ರಮ ಸರ್ಕಾರ' ಎಂದು ತಿಳಿಸಿದೆ.
'ಗಾಜಿ 2' ಹೆಸರಿನ 'ಎಕ್ಸ್' ಖಾತೆಯ ಮೂಲಕ ಈ ಹೇಳಿಕೆಯನ್ನು ಹಂಚಿಕೊಳ್ಳಲಾಗಿದೆ. ವಸುಂಧರಾ ಹೊರಠಾಣೆಯಲ್ಲಿ ನಡೆದ ಸ್ಫೋಟದ ಹಿಂದೆ ತಮ್ಮ ಗುಂಪು ಇದೆ. ಜೊತೆಗೆ ಪೊಲೀಸ್ ಠಾಣೆಯನ್ನು ಸ್ಫೋಟಿಸುವುದಾಗಿ ಆ ಖಾತೆಯಲ್ಲಿ ಬೆದರಿಕೆ ಹಾಕಿರುವುದಾಗಿ ವರದಿಯಾಗಿದೆ.
ಉತ್ತರ ಪ್ರದೇಶದ ಭಯೋತ್ಪಾದನಾ ನಿಗ್ರಹ ದಳ ಕೂಡ ಈ ತನಿಖೆಯಲ್ಲಿ ಪಾಲ್ಗೊಂಡಿದೆ. ಸ್ಫೋಟಕ್ಕೆ ಸಂಬಂಧಿಸಿದ ಸನ್ನಿವೇಶಗಳನ್ನು ತನಿಖೆ ನಡೆಸಲು ಎಟಿಎಸ್ ತಂಡವೊಂದು ಸ್ಥಳಕ್ಕೆ ಆಗಮಿಸಿದೆ.