ನವದೆಹಲಿ, ನ.07 (DaijiworldNews/AK): ದೆಹಲಿಯಲ್ಲಿ ವಾಯುಗುಣಮಟ್ಟ ಸಾಕಷ್ಟು ಹದಗೆಟ್ಟಿದ್ದು, ವಾಯುಗುಣ ಸೂಚ್ಯಂಕ ಮಟ್ಟ 400 ಮೀರಿದೆ. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮಕ್ಕೆ ಮುಂದಾಗಿರುವ ದೆಹಲಿ ಶಿಕ್ಷಣ ಇಲಾಖೆ ಎಲ್ಲ ಸರ್ಕಾರಿ ಮತ್ತು ಖಾಸಗಿ ಶಾಲೆಗಳಲ್ಲಿ 5 ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಹೈಬ್ರಿಡ್ ಮೂಡ್ನಲ್ಲಿ ತರಗತಿ ನಡೆಸುವಂತೆ ಸೂಚನೆ ನೀಡಿದೆ.

ದೆಹಲಿ ಶಿಕ್ಷಣ ನಿರ್ದೇಶನಾಲಯದ ವ್ಯಾಪ್ತಿಗೆ ಬರುವ ಎಲ್ಲ ಸರ್ಕಾರಿ, ಸರ್ಕಾರಿ ಅನುದಾನಿತ ಮತ್ತು ಅನುದಾನರಹಿತ ಮಾನ್ಯತೆ ಪಡೆದ ಖಾಸಗಿ ಶಾಲೆಗಳಿಗೆ, ಹಾಗೂ ಎನ್ಡಿಎಂಸಿ, ಎಂಸಿಡಿ ಮತ್ತು ದೆಹಲಿ ಕಂಟೋನ್ಮೆಂಟ್ ಬೋರ್ಡ್ನಿಂದ ನಡೆಸಲ್ಪಡುವ ಶಾಲೆಗಳಿಗೆ ಅನ್ವಯಿಸುತ್ತದೆ. ದೆಹಲಿಯ ಎಲ್ಲ ಸರ್ಕಾರಿ ಮತ್ತು ಖಾಸಗಿ ಶಾಲೆಗಳು 5ನೇ ತರಗತಿಯವರೆಗಿನ ತರಗತಿಗಳನ್ನು ಹೈಬ್ರಿಡ್ ಮಾದರಿಯಲ್ಲಿ ನಡೆಸಲಿದ್ದು, ವಿದ್ಯಾರ್ಥಿಗಳು ಶಾಲೆಗೆ ಖುದ್ದಾಗಿ ಹಾಜರಾಗಬಹುದು ಅಥವಾ ಆನ್ಲೈನ್ ಮೂಲಕ ತರಗತಿಗಳಲ್ಲಿ ಪಾಲ್ಗೊಳ್ಳಬಹುದು ಎಂದು ತಿಳಿಸಲಾಗಿದೆ.
ಪ್ರಕಟಣೆ ಅನುಸಾರ, ದೆಹಲಿ - ಎನ್ಸಿಆರ್ ವ್ಯಾಪ್ತಿಯಲ್ಲಿ ಗ್ರೇಡೆಡ್ ರೆಸ್ಪಾನ್ಸ್ ಆ್ಯಕ್ಷನ್ ಪ್ಲಾನ್ನ ಮೂರನೇ ಹಂತದ ಅಡಿ ಬರುವ ಎಲ್ಲ ಕ್ರಮಗಳನ್ನು ತಕ್ಷಣಕ್ಕೆ ಜಾರಿಗೆ ತರುವಂತೆ ಕಮಿಷನ್ ಫಾರ್ ಏರ್ ಕ್ವಾಲಿಟಿ ಮ್ಯಾನೇಜ್ಮೆಂಟ್ ನೀಡಿದ್ದು, ಈ ಆದೇಶಕ್ಕೆ ಅನುಗುಣವಾಗಿ ನಿರ್ಧಾರ ತೆಗೆದುಕೊಳ್ಳಲಾಗಿದೆ.
ವಾಯು ಗುಣಮಟ್ಟ ನಿರ್ವಹಣಾ ಆಯೋಗ, ಪರಿಸ್ಥಿತಿ ಮೇಲ್ವಿಚಾರಣೆಗೆ ಶುಕ್ರವಾರದಿಂದ ದೆಹಲಿ - ಎನ್ಸಿಆರ್ ಪ್ರದೇಶದಲ್ಲಿ ಜಿಆರ್ಎಪಿ ಅಡಿ ಮೂರನೇ ಹಂತದ ಕ್ರಮಗಳನ್ನು ಜಾರಿಗೊಳಿಸಿದೆ.
ಹೈಬ್ರೀಡ್ ಮಾದರಿ ಕುರಿತು ಬಗ್ಗೆ ಪೋಷಕರು ಮತ್ತು ರಕ್ಷಕರಿಗೆ ತಕ್ಷಣವೇ ಮಾಹಿತಿ ನೀಡುವಂತೆ ಶಾಲಾ ಮುಖ್ಯಸ್ಥರಿಗೆ ನಿರ್ದೇಶನಾಲಯವು ಸೂಚಿಸಿದೆ. ಸೂಚನೆಗಳನ್ನು ಸುಗಮವಾಗಿ ಜಾರಿಗೊಳಿಸುವುದನ್ನು ಖಚಿತಪಡಿಸಿಕೊಳ್ಳಲು, ತಮ್ಮ ವ್ಯಾಪ್ತಿಯಲ್ಲಿ ಬರುವ ಶಾಲೆಗಳಿಗೆ ಭೇಟಿ ನೀಡುವಂತೆ ಜಿಲ್ಲೆಗಳು ಮತ್ತು ವಲಯಗಳ ಶಿಕ್ಷಣ ಉಪ ನಿರ್ದೇಶಕರಿಗೆ ಸೂಚಿಸಲಾಗಿದೆ.