ನವದೆಹಲಿ, ನ.07 (DaijiworldNews/AA): ಇ20 ಈಗ 420 ಆಗಿದೆ. ಜನರ ವಾಹನಗಳ ಪೆಟ್ರೋಲನ್ನೇ ಕದಿಯಲಾಗುತ್ತಿದೆ ಎಂದು ವಿಪಕ್ಷ ನಾಯಕ ರಾಹುಲ್ ಗಾಂಧಿ ತಿಳಿಸಿದ್ದಾರೆ.

ಕೇಂದ್ರ ಸರ್ಕಾರದ ಎಥನಾಲ್ ಮಿಶ್ರಣ ನೀತಿಯ ಕುರಿತು ಎಕ್ಸ್ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, "ದೇಶದ ಪ್ರಮುಖ ತೈಲ ಮಾರುಕಟ್ಟೆ ಕಂಪನಿಗಳು ನಿಗದಿತ ಶೇ.20ರ ಮಿತಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಎಥೆನಾಲ್ ಮಿಶ್ರಿತ ಪೆಟ್ರೋಲ್ ಪೂರೈಸುತ್ತಿವೆ. ಕರ್ನಾಟಕದ 7 ಜಿಲ್ಲೆಗಳಿಂದ ಸಂಗ್ರಹಿಸಲಾದ ಪೆಟ್ರೋಲ್ ಮಾದರಿಗಳನ್ನ ಪ್ರಯೋಗಾಲಯದಲ್ಲಿ ಪರೀಕ್ಷಿಸಿದಾಗ ಈ ಅಂಶ ಬೆಳಕಿಗೆ ಬಂದಿದೆ. ಮಾನ್ಯತೆ ಪಡೆದ ಪ್ರಯೋಗಾಲಯದಲ್ಲಿ ಪರೀಕ್ಷಿಸಲಾದ ಒಟ್ಟು 14 ಪೆಟ್ರೋಲ್ ಮಾದರಿಗಳ ಪೈಕಿ 11 ಮಾದರಿಗಳಲ್ಲಿ ಎಥೆನಾಲ್ ಪ್ರಮಾಣ ಶೇ.20ಕ್ಕಿಂತ ಹೆಚ್ಚಿರುವುದು ಕಂಡುಬಂದಿದೆ" ಎಂದು ಕಿಡಿಕಾರಿದ್ದಾರೆ.
"ಸಾರ್ವಜನಿಕ ವಲಯದ ಹಾಗೂ ಖಾಸಗಿ ತೈಲ ಕಂಪನಿಗಳು ನಿಗದಿತ ಮಿತಿಯನ್ನ ಮೀರಿ ಎಥೆನಾಲ್ ಮಿಶ್ರಣ ಮಾಡುತ್ತಿವೆ. ಇಂಡಿಯನ್ ಆಯಿಲ್ ಕಾರ್ಪೊರೇಷನ್ ಪೆಟ್ರೋಲ್ ಮಾದರಿಯಲ್ಲಿ ಶೇ.31.2ರಷ್ಟು ಹಾಗೂ ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ ಮಾದರಿಯಲ್ಲಿ ಶೇ.30.5ರಷ್ಟು ಎಥೆನಾಲ್ ಅಂಶ ದಾಖಲಾಗಿದೆ. ಕರ್ನಾಟಕದ ಬೆಂಗಳೂರು, ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ರಾಮನಗರ, ಮಂಗಳೂರು ಹಾಗೂ ತುಮಕೂರು ಜಿಲ್ಲೆಗಳಿಂದ ಈ ಪೆಟ್ರೋಲ್ ಮಾದರಿಗಳನ್ನ ಸಂಗ್ರಹಿಸಲಾಗಿತ್ತು. ಇಂಡಿಯನ್ ಆಯಿಲ್ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಮಾತ್ರವಲ್ಲದೆ, ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್, ನಯಾರಾ ಎನರ್ಜಿ ಹಾಗೂ ಶೆಲ್ ಕಂಪನಿಗಳ ಪೆಟ್ರೋಲ್ ಮಾದರಿಗಳನ್ನೂ ಪರೀಕ್ಷೆಗೆ ಒಳಪಡಿಸಲಾಗಿತ್ತು" ಎಂದು ಪೋಸ್ಟ್ ಮಾಡಿದ್ದಾರೆ.
"ಮೋದಿ ಅವರೇ, ದೇಶದ ವಾಹನಗಳ ಟ್ಯಾಂಕ್ಗಳಿಗೆ ನಿಜವಾಗಿ ಏನನ್ನು ತುಂಬಲಾಗುತ್ತಿದೆ ಎಂಬುದನ್ನು ತಿಳಿಸಿ. ಪೆಟ್ರೋಲ್ನಲ್ಲಿ ಎಷ್ಟು ಪ್ರಮಾಣದ ಎಥೆನಾಲ್ ಮಿಶ್ರಣ ಮಾಡಲಾಗುತ್ತಿದೆ? ಶೇ.20ಕ್ಕಿಂತ ಹೆಚ್ಚು ಎಥೆನಾಲ್ ಮಿಶ್ರಣ ಮಾಡುತ್ತಿರುವ ಕಂಪನಿಗಳ ವಿರುದ್ಧ ಯಾವಾಗ ಕ್ರಮ ಕೈಗೊಳ್ಳಲಾಗುತ್ತದೆ? ಸರ್ಕಾರದ ನೀತಿಗಳಿಂದ ನಿಜವಾಗಿಯೂ ಯಾರಿಗೆ ಲಾಭವಾಗುತ್ತಿದೆ? ಎಂದು ಪ್ರಶ್ನಿಸಿದ್ದಾರಲ್ಲದೇ, ಎಥೆನಾಲ್ ಮಿಶ್ರಣದ ವಿಚಾರ ಚರ್ಚೆಸೋಣ ಬನ್ನಿ" ಎಂದು ಹೇಳಿದರು.