ಲಕ್ನೋ, ನ.07 (DaijiworldNews/AA): ಮುಂಬರುವ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ ಹಿನ್ನೆಲೆ ಅರ್ಹ ಮಹಿಳೆಯರಿಗೆ 50,000 ರೂ.ಗಳ ಆರ್ಥಿಕ ನೆರವು ನೀಡಲು ಸಿಎಂ ಯೋಗಿ ಆದಿತ್ಯನಾಥ್ ನೇತೃತ್ವದ ಬಿಜೆಪಿ ಸರ್ಕಾರ ಚಿಂತನೆ ನಡೆಸಿದೆ.

ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು ತಮ್ಮ ಪಕ್ಷವು ಅಧಿಕಾರಕ್ಕೆ ಬಂದರೆ 'ಸ್ತ್ರೀ ಸಮ್ಮಾನ್-ಸಮೃದ್ಧಿ ಯೋಜನೆ'ಯ ಅಡಿಯಲ್ಲಿ 40,000 ರೂ.ಗಳನ್ನ ನೀಡುವುದಾಗಿ ಘೋಷಿಸಿದ್ದರು. ಇದೀಗ ಇದರ ಬೆನ್ನಲ್ಲೇ ಬಿಜೆಪಿ ಸರ್ಕಾರವು 10,000 ರೂ. ಹೆಚ್ಚುವರಿ ಮೊತ್ತವನ್ನು ಸೇರಿಸಿ 50,000 ರೂ. ನೀಡುವುದಾಗಿ ಭರವಸೆ ನೀಡಿದೆ.
ಕೆಲ ದಿನಗಳ ಹಿಂದೆಯೇ ಸಿಎಂ ಯೋಗಿ ಆದಿತ್ಯನಾಥ್ ಅವರು ನೀಡಿದ ಭರವಸೆಯಂತೆ, ರಾಜ್ಯ ಸರ್ಕಾರವು ಅರ್ಹ ಮಹಿಳೆಯರಿಗೆ 50,000 ರೂ.ವರೆಗಿನ ಆರ್ಥಿಕ ನೆರವು ಯೋಜನೆ ಅನುಷ್ಠಾನಗೊಳಿಸಲು ಚಿಂತನೆ ನಡೆಸಿದೆ. ಮುಖ್ಯಮಂತ್ರಿಗಳೇ ಖುದ್ದು ಈ ವಿಷಯದ ಬಗ್ಗೆ ಗಮನ ಹರಿಸುತ್ತಿದ್ದು, ಈ ಪ್ರಸ್ತಾವನೆಯು ಅತ್ಯುನ್ನತ ಮಟ್ಟದಲ್ಲಿ ಪರಿಶೀಲನೆಯಲ್ಲಿದೆ ಎಂದು ತಿಳಿದುಬಂದಿದೆ.