ಬೆಳಗಾವಿ, ನ.07 (DaijiworldNews/TA): ದೀಪಾವಳಿ ಹಬ್ಬದ ಸಂಭ್ರಮಕ್ಕೆ ಕುಂದಾನಗರಿ ಬೆಳಗಾವಿ ಸಜ್ಜಾಗುತ್ತಿದೆ. ಮನೆಗಳನ್ನು ಅಲಂಕರಿಸಲು ಜನರು ವಿವಿಧ ಬಗೆಯ ಅಲಂಕಾರಿಕ ವಸ್ತುಗಳ ಖರೀದಿಯಲ್ಲಿ ತೊಡಗಿದ್ದಾರೆ. ಈ ನಡುವೆ ಮಾರುಕಟ್ಟೆಯಲ್ಲಿ ಈ ಬಾರಿ ಪ್ಲಾಸ್ಟಿಕ್ ಮತ್ತು ಕೃತಕ ಅಲಂಕಾರಿಕ ವಸ್ತುಗಳಿಗಿಂತ ನೈಸರ್ಗಿಕ ಬಿದಿರಿನಿಂದ ತಯಾರಿಸಿದ ಸುಂದರ ಬುಟ್ಟಿಗಳಿಗೆ ಭಾರೀ ಬೇಡಿಕೆ ವ್ಯಕ್ತವಾಗಿದೆ. ಪರಿಸರ ಸ್ನೇಹಿ ಉತ್ಪನ್ನಗಳತ್ತ ಜನರು ಒಲವು ತೋರುತ್ತಿರುವುದು ಈ ಬಾರಿಯ ವಿಶೇಷವಾಗಿದೆ. ಕೈಯಿಂದಲೇ ತಯಾರಿಸಲಾದ ವಿಭಿನ್ನ ವಿನ್ಯಾಸದ ಬಿದಿರಿನ ಬುಟ್ಟಿಗಳು ಗ್ರಾಹಕರ ಗಮನ ಸೆಳೆಯುತ್ತಿದ್ದು, ಮಾರುಕಟ್ಟೆಯಲ್ಲಿ ವಿಶೇಷ ಆಕರ್ಷಣೆಯಾಗಿವೆ.

ಪ್ಲಾಸ್ಟಿಕ್ ಅಲಂಕಾರಕ್ಕೆ ಬದಲಾಗಿ ಬಿದಿರಿನ ಸೊಬಗು! : ಹಬ್ಬದ ಸಂದರ್ಭದಲ್ಲಿ ಮಾರುಕಟ್ಟೆಗೆ ಬರುವ ಪ್ಲಾಸ್ಟಿಕ್ ಹಾಗೂ ಚೀನಾ ನಿರ್ಮಿತ ಅಲಂಕಾರಿಕ ವಸ್ತುಗಳು ಕೆಲವೇ ದಿನಗಳ ಬಳಕೆಯ ಬಳಿಕ ಮೂಲೆ ಸೇರುತ್ತವೆ. ಆದರೆ ಬಿದಿರಿನಿಂದ ತಯಾರಿಸಿದ ಬುಟ್ಟಿಗಳು ನೈಸರ್ಗಿಕ ಸೊಬಗಿನ ಜೊತೆಗೆ ದೀರ್ಘಕಾಲ ಬಳಕೆಗೆ ಬರುವುದರಿಂದ ಗ್ರಾಹಕರನ್ನು ಆಕರ್ಷಿಸುತ್ತಿವೆ.
ದೀಪಾವಳಿ ಹಬ್ಬದ ಅಲಂಕಾರಕ್ಕೆ ಮಾತ್ರವಲ್ಲದೆ, ಹಬ್ಬ ಮುಗಿದ ಬಳಿಕವೂ ಮನೆಯ ಮುಂಭಾಗದಲ್ಲಿ ಅಥವಾ ಒಳಾಂಗಣದಲ್ಲಿ ಅಲಂಕಾರಿಕ ವಸ್ತುವಾಗಿ ಬಳಸಬಹುದಾಗಿದೆ. ಹೀಗಾಗಿ ಇವುಗಳ ಖರೀದಿಗೆ ಜನರು ಹೆಚ್ಚಿನ ಆಸಕ್ತಿ ತೋರಿಸುತ್ತಿದ್ದಾರೆ. ಬೆಳಗಾವಿ ಮಾರುಕಟ್ಟೆಯಲ್ಲಿ ಬಿದಿರಿನ ಬುಟ್ಟಿಗಳ ಬೆಲೆ 400 ರೂಪಾಯಿಯಿಂದ ಆರಂಭವಾಗಿ ವಿನ್ಯಾಸ ಮತ್ತು ಗಾತ್ರಕ್ಕೆ ಅನುಗುಣವಾಗಿ 2,000 ರೂಪಾಯಿವರೆಗೆ ಇದೆ. ಪ್ಲಾಸ್ಟಿಕ್ ವಸ್ತುಗಳಿಗೆ ಹೋಲಿಸಿದರೆ ಬೆಲೆ ತುಸು ಹೆಚ್ಚಿದ್ದರೂ, ಅವುಗಳ ವಿಭಿನ್ನ ವಿನ್ಯಾಸ, ನೈಸರ್ಗಿಕ ಸೌಂದರ್ಯ ಮತ್ತು ಬಾಳಿಕೆ ಗ್ರಾಹಕರನ್ನು ಸೆಳೆಯುತ್ತಿವೆ.
ಈ ಬಿದಿರಿನ ಬುಟ್ಟಿಗಳ ವಿಶೇಷತೆಯೆಂದರೆ ಇವುಗಳನ್ನು ಯಾವುದೇ ಆಧುನಿಕ ಯಂತ್ರಗಳ ಸಹಾಯವಿಲ್ಲದೆ ಸಂಪೂರ್ಣವಾಗಿ ಕೈಯಿಂದಲೇ ತಯಾರಿಸಲಾಗುತ್ತದೆ. ಬಿದಿರನ್ನು ಸೂಕ್ತವಾಗಿ ಸೀಳಿ, ಹೆಣೆದು, ಆಕರ್ಷಕ ವಿನ್ಯಾಸ ನೀಡಲು ಸಾಕಷ್ಟು ಕೌಶಲ ಮತ್ತು ತಾಳ್ಮೆ ಅಗತ್ಯವಿದೆ. ಒಬ್ಬ ವ್ಯಕ್ತಿ ಸತತವಾಗಿ ಇಡೀ ದಿನ ಶ್ರಮಿಸಿದರೆ ಮಾತ್ರ ಒಂದು ಸುಂದರ ಬುಟ್ಟಿಯನ್ನು ಸಿದ್ಧಪಡಿಸಲು ಸಾಧ್ಯ. ಬೆಳಗಾವಿಯ ಸ್ಥಳೀಯ ವ್ಯಾಪಾರಿ ಮಹೇಶ್ ಅವರು ತಯಾರಿಸುತ್ತಿರುವ ಈ ಸಾಂಪ್ರದಾಯಿಕ ಕರಕುಶಲ ವಸ್ತುಗಳು ಇದೀಗ ಗ್ರಾಹಕರ ಮೆಚ್ಚುಗೆ ಗಳಿಸಿವೆ.
ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡಿ ಪರಿಸರ ಸ್ನೇಹಿ ಉತ್ಪನ್ನಗಳತ್ತ ಜನರು ಮುಖ ಮಾಡುತ್ತಿರುವುದು ಸ್ಥಳೀಯ ಕರಕುಶಲ ಕಲಾವಿದರಿಗೆ ಹೊಸ ಅವಕಾಶಗಳನ್ನು ತೆರೆದಿದೆ. ಸಾಂಪ್ರದಾಯಿಕ ಬಿದಿರಿನ ಕಲೆಗೆ ಮತ್ತೆ ಬೇಡಿಕೆ ಹೆಚ್ಚುತ್ತಿರುವುದು ದೇಶೀಯ ಕಲೆ ಮತ್ತು ಕಲಾವಿದರಿಗೆ ಉತ್ತೇಜನ ನೀಡಿದಂತಾಗಿದೆ. ಒಟ್ಟಿನಲ್ಲಿ, ಈ ಬಾರಿಯ ದೀಪಾವಳಿಯಲ್ಲಿ ಬೆಳಗಾವಿ ಮಾರುಕಟ್ಟೆಯಲ್ಲಿ ಬಿದಿರಿನ ಬುಟ್ಟಿಗಳದ್ದೇ ವಿಶೇಷ ಮೆರುಗು. ಪ್ಲಾಸ್ಟಿಕ್ ಅಲಂಕಾರಗಳ ನಡುವೆಯೂ ಪ್ರಕೃತಿಯ ಮಡಿಲಿನಿಂದ ಬಂದ ಕರಕುಶಲ ಕಲೆಗೆ ಜನರು ಮಣೆ ಹಾಕುತ್ತಿರುವುದು ಗಮನಾರ್ಹವಾಗಿದೆ.