ಬೆಂಗಳೂರು, ನ.07 (DaijiworldNews/AK): ಕಾಂಗ್ರೆಸ್ಸಿನವರ ಪಾಪದ ಕೊಡ ತುಂಬಿದೆ. ನಿಮ್ಮ ಈ ಅಹಂಕಾರ, ದುರಹಂಕಾರ, ನಿಮ್ಮ ಅಧಿಕಾರದ ಮದವನ್ನು ಮೊನ್ನೆ ವಿಧಾನ ಪರಿಷತ್ ಚುನಾವಣೆಯಲ್ಲಿ ಜನತೆ ಇಳಿಸಿದ್ದಾರೆ, ಅತೀ ಶೀಘ್ರದಲ್ಲೇ ನಿಮ್ಮ ಈ ಅಹಂಕಾರ, ಅಧಿಕಾರದ ಮದವನ್ನು ಇಳಿಸುವ ಕೆಲಸವನ್ನು ರಾಜ್ಯದ ಜನತೆ ಮಾಡಲಿದ್ದಾರೆ ಎಂದು ರಾಜ್ಯದ ಮುಖ್ಯಮಂತ್ರಿಗಳು, ಕೆಪಿಸಿಸಿ ಅಧ್ಯಕ್ಷರು ಮತ್ತು ಮಾನ್ಯ ಗೃಹ ಸಚಿವರಿಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಎಚ್ಚರಿಸಿದ್ದಾರೆ.

ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಮ್ಮ ವಿಪಕ್ಷ ನಾಯಕರಾದ ಛಲವಾದಿ ನಾರಾಯಣಸ್ವಾಮಿ ಅವರ ಮನೆಗೆ ನೂರಾರು ಚೂರಿಗಳು ಮತ್ತು ಚಾಕುಗಳನ್ನು ಕಳಿಸುವುದರ ಮುಖೇನ ಕಾಂಗ್ರೆಸ್ ಪಕ್ಷ, ಕಾಂಗ್ರೆಸ್ ಸರ್ಕಾರ, ಕಾಂಗ್ರೆಸ್ ಕಾರ್ಯಕರ್ತರ ಸಂಸ್ಕೃತಿಯನ್ನು ಮತ್ತೊಮ್ಮೆ ಅನಾವರಣಗೊಳಿಸುವ ಕೆಲಸ ಅವರು ಮಾಡಿದ್ದಾರೆ ಎಂದು ಟೀಕಿಸಿದರು.
ಕಾಂಗ್ರೆಸ್ ಸರ್ಕಾರ ಇದು ಗೂಂಡಾ ಸರ್ಕಾರ ಅನ್ನೋದನ್ನು ದೇಶದ ಜನತೆಗೆ ಇವತ್ತು ತೋರಿಸಿಕೊಟ್ಟಿದ್ದಾರೆ ಎಂದು ಆಕ್ಷೇಪಿಸಿದರು.
ಕಾಂಗ್ರೆಸ್ ಪಕ್ಷದಲ್ಲೂ ಕೊತ್ವಾಲ್ ರಾಮಚಂದ್ರನ ಗುಣ..
ಕೊತ್ವಾಲ್ ರಾಮಚಂದ್ರ ಇವತ್ತು ಇಲ್ಲ. ಆದರೆ ಕೊತ್ವಾಲ್ ರಾಮಚಂದ್ರ ಜೊತೆಯಲ್ಲಿ ಗೂಂಡಾಗಿರ್ದಿ ಮಾಡಿಕೊಂಡು ಬಂದಂತವರು ಕಾಂಗ್ರೆಸ್ ಪಕ್ಷದ ವ್ಯವಸ್ಥೆಯಲ್ಲೂ ಇದ್ದಾರೆ. ಸರ್ಕಾರದಲ್ಲೂ ಕೂಡ ಇದ್ದಾರೆ. ಹುಟ್ಟುಗುಣ ಸುಟ್ಟರೂ ಹೋಗಲ್ಲ ಅನ್ನುವಂತೆ ಇವರ ವರ್ತನೆ ಇದೆ. ಕಾಂಗ್ರೆಸ್ ಸರ್ಕಾರ ಸಂಪೂರ್ಣ ಹತಾಶ ಸ್ಥಿತಿಯಲ್ಲಿದೆ. ಡಿ.ಕೆ. ಶಿವಕುಮಾರ್, ಬಿ.ಕೆ. ಹರಿಪ್ರಸಾದ್, ಪ್ರಿಯಾಂಕ್ ಖರ್ಗೆ ಎಂಬ ಈ ಡಿಕೆ, ಬಿಕೆ ಮತ್ತು ಪಿಕೆ- ಇವರ ಗೂಂಡಾವರ್ತನೆಯನ್ನು ಯಾರೂ ಕ್ಷಮಿಸುವುದಕ್ಕೆ ಸಾಧ್ಯ ಇಲ್ಲ ಎಂದು ತಿಳಿಸಿದರು.
ಭಾರತೀಯ ಜನತಾ ಪಾರ್ಟಿ ಇದನ್ನು ನಾವು ಬಲವಾಗಿ ಖಂಡಿಸುತ್ತೇವೆ. ನಾನು ಇತ್ತೀಚೆಗೆ ದಾವಣಗೆರೆಯಲ್ಲಿ ಏನೋ ಒಂದು ಮಾತನ್ನು ಆಡಿದ್ದೆ, ನಾನು ಹೇಳಿದ್ದೇನೆ ಬಾಯಿ ತಪ್ಪಿನಿಂದ ಬಂದಿದೆ, ಅದನ್ನು ಹಿಂತೆಗೆದುಕೊಳ್ಳುತ್ತೇನೆ ಅಂತ ಹೇಳಿ ವಿಷಾದವನ್ನು ವ್ಯಕ್ತಪಡಿಸಿದ್ದೇನೆ. ಈ ಲಜ್ಜೆಗೆಟ್ಟ ಕಾಂಗ್ರೆಸ್ ಪಕ್ಷ ಪೋಸ್ಟರ್ ಅಭಿಯಾನವನ್ನು ಮಾಡುತ್ತಿದೆ ಎಂದು ಆಕ್ಷೇಪಿಸಿದರು.