ನವದೆಹಲಿ, ನ.07 (DaijiworldNews/AK): ಭಾರತೀಯ ವಾಯುಪಡೆಯ IL-76MD ಭಾರೀ ಸರಕು ಸಾಗಣೆ ವಿಮಾನವು ಲಡಾಖ್ನ 13,629 ಅಡಿ ಎತ್ತರದಲ್ಲಿರುವ ನ್ಯೋಮಾ ವಾಯುನೆಲೆಯಲ್ಲಿ ಯಶಸ್ವಿಯಾಗಿ ಇಳಿಯುವ ಮೂಲಕ, ವಾಯುಯಾನ ಇತಿಹಾಸದಲ್ಲಿ ಹೊಸ ಅಧ್ಯಾಯವೊಂದನ್ನು ಬರೆದಿದೆ.

ಭಾರತೀಯ ವಾಯುಪಡೆಯು ತನ್ನ ಎಕ್ಸ್ ಪೋಸ್ಟ್ನಲ್ಲಿ ಈ ಸಾಧನೆಯನ್ನು ಪ್ರಕಟಿಸಿದೆ. ಇದರಲ್ಲಿ, ಅತಿ ಎತ್ತರದ ಪ್ರದೇಶದಲ್ಲಿರುವ ವಾಯುನೆಲೆಯಲ್ಲಿನ ವಿಮಾನದ ಛಾಯಾಚಿತ್ರಗಳು ಮತ್ತು ವೀಡಿಯೊವನ್ನು ಹಂಚಿಕೊಳ್ಳಲಾಗಿದೆ. ಜಗತ್ತಿನಾದ್ಯಂತ IL-76MD ವಿಮಾನವೊಂದು ಇಳಿದಿರುವ ಅತ್ಯಂತ ಎತ್ತರದ ಸ್ಥಳ ಇದಾಗಿದೆ ಎಂದು ತಿಳಿಸಿದೆ.
‘13,629 ಅಡಿ. ವಾಯುಯಾನ ಇತಿಹಾಸದಲ್ಲಿ ಒಂದು ಹೊಸ ಎತ್ತರ’ ಎಂದು ಭಾರತೀಯ ವಾಯುಪಡೆಯು ತನ್ನ ಪೋಸ್ಟ್ನಲ್ಲಿ ತಿಳಿಸಿದೆ. ಇದು ವಿಮಾನದ ಸಾಮರ್ಥ್ಯ ಮತ್ತು ಅದರ ಸಿಬ್ಬಂದಿಯ ಪರಿಣತಿಯನ್ನು ತೋರಿಸುವ ಒಂದು ಗಮನಾರ್ಹ ನಿದರ್ಶನವಾಗಿದೆ ಎಂದು ಐಎಎಫ್ ಬಣ್ಣಿಸಿದೆ.
ಈ ಕಾರ್ಯಾಚರಣೆಯಲ್ಲಿ ಭಾಗಿಯಾದ ಸಿಬ್ಬಂದಿಯ ಕೌಶಲ, ನಿಖರತೆ ಮತ್ತು ವೃತ್ತಿಪರತೆಯನ್ನು ವಾಯುಪಡೆ ಶ್ಲಾಘಿಸಿದೆ. ಈ ಮಹತ್ವದ ಮೈಲಿಗಲ್ಲು ಭಾರತದ ಕಾರ್ಯತಂತ್ರದ ವೈಮಾನಿಕ ಸಾಗಣೆ ಸಾಮರ್ಥ್ಯವನ್ನು ಇನ್ನಷ್ಟು ಬಲಪಡಿಸುತ್ತದೆ ಎಂದು ತಿಳಿಸಿದೆ.