ಅಯೋಧ್ಯೆ, ನ.08 (DaijiworldNews/TA): ರಾಮನಗರಿ ಅಯೋಧ್ಯೆಯಲ್ಲಿ ಈ ಬಾರಿಯ ದೀಪಾವಳಿ ಅದ್ಧೂರಿಯಾಗಿ ಆಚರಿಸಲಾಗಿದ್ದು, ದೀಪೋತ್ಸವದ ಮೂಲಕ ಹೊಸ ದಾಖಲೆ ನಿರ್ಮಿಸಲಾಗಿದೆ. ಸರಯೂ ನದಿಯ ತೀರದಲ್ಲಿ 36 ಲಕ್ಷಕ್ಕೂ ಅಧಿಕ ದೀಪಗಳನ್ನು ಬೆಳಗಿಸುವ ಮೂಲಕ ಅಯೋಧ್ಯೆ ಮತ್ತೊಮ್ಮೆ ವಿಶ್ವದ ಗಮನ ಸೆಳೆದಿದೆ.

ಭಗವಾನ್ ಶ್ರೀರಾಮ, ಸೀತೆ ಹಾಗೂ ಲಕ್ಷ್ಮಣರು 14 ವರ್ಷಗಳ ವನವಾಸ ಮುಗಿಸಿ ಅಯೋಧ್ಯೆಗೆ ಮರಳಿದ ಸಂಭ್ರಮದ ಸ್ಮರಣಾರ್ಥ ದೀಪಾವಳಿ ಆಚರಿಸಲಾಗುತ್ತದೆ. ಇದೇ ಪೌರಾಣಿಕ ಹಿನ್ನೆಲೆಯೊಂದಿಗೆ ಅಯೋಧ್ಯೆಯಲ್ಲಿ ಪ್ರತಿವರ್ಷ ದೀಪೋತ್ಸವವನ್ನು ಆಯೋಜಿಸಲಾಗುತ್ತದೆ. ಈ ಬಾರಿ ಸರಯೂ ನದಿಯ ದಡದಲ್ಲಿರುವ 56 ಘಾಟ್ಗಳಲ್ಲಿ ಸುಮಾರು 30 ಲಕ್ಷ ಮಣ್ಣಿನ ಹಣತೆಗಳನ್ನು ಏಕಕಾಲದಲ್ಲಿ ಬೆಳಗಿಸಲಾಗಿದೆ. ಇದರೊಂದಿಗೆ ದೀಪೋತ್ಸವದಲ್ಲಿ ಹೊಸ ಗಿನ್ನೆಸ್ ವಿಶ್ವ ದಾಖಲೆಯನ್ನು ನಿರ್ಮಿಸಲಾಗಿದೆ ಎಂದು ವರದಿಯಾಗಿದೆ. ಒಟ್ಟಾರೆ 36 ಲಕ್ಷ ದೀಪಗಳ ಬೆಳಕಿನಿಂದ ಇಡೀ ರಾಮನಗರಿ ಕಂಗೊಳಿಸಿದೆ.
ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಹಾಗೂ ಉತ್ತರ ಪ್ರದೇಶದ ರಾಜ್ಯಪಾಲೆ ಆನಂದಿಬೆನ್ ಪಟೇಲ್ ಅವರು ಅಯೋಧ್ಯೆಯ ಶ್ರೀರಾಮ ಜನ್ಮಭೂಮಿ ದೇವಸ್ಥಾನದಲ್ಲಿ ಆರತಿ ನೆರವೇರಿಸುವ ಮೂಲಕ ದೀಪೋತ್ಸವದ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ನ ಪ್ರಧಾನ ಕಾರ್ಯದರ್ಶಿ ಸ್ವಾಮಿ ಗೋವಿಂದ ದೇವಗಿರಿ ಜಿ ಮಹಾರಾಜ್ ಅವರು ಗಣ್ಯರನ್ನು ಸ್ವಾಗತಿಸಿದರು. ದೀಪಗಳ ಸಾಲು, ಭವ್ಯ ಅಲಂಕಾರ ಹಾಗೂ ಧಾರ್ಮಿಕ ಕಾರ್ಯಕ್ರಮಗಳಿಂದ ಅಯೋಧ್ಯೆ ಸಂಪೂರ್ಣವಾಗಿ ಹಬ್ಬದ ಸಂಭ್ರಮದಲ್ಲಿ ಮುಳುಗಿದ್ದು, ಶ್ರೀರಾಮನ ಆಗಮನದ ಸಂಭ್ರಮವನ್ನು ಮತ್ತೊಮ್ಮೆ ನೆನಪಿಸುವಂತೆ ಮಾಡಿದೆ.