ಬೆಂಗಳೂರು, ನ.08 (DaijiworldNews/AA): ಸರ್ಕಾರ ಹಾಲಿನ ದರವನ್ನು 4-5 ರೂ. ಇಳಿಸಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಆಗ್ರಹ ಮಾಡಿದ್ದಾರೆ.

ಧವಳಗಿರಿ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, "ಬಹಳ ನೋವಿನಿಂದ ಈ ಸುದ್ದಿಗೋಷ್ಠಿ ಮಾಡುತ್ತಿದ್ದೇನೆ. ನಾಡಿನಲ್ಲಿ ಯಾರೂ ಕೂಡಾ ಸಂತೋಷದಿಂದ ದೀಪಾವಳಿ ಆಚರಿಸುವ ಸಂದರ್ಭದಲ್ಲಿಲ್ಲ. ರಾಜ್ಯ ಸರ್ಕಾರಕ್ಕೆ ಜನ ಶಾಪ ಹಾಕುತ್ತಿದ್ದಾರೆ. ಡಿಕೆಶಿ ಅವರು ರಾಜ್ಯದಲ್ಲಿ ಬೆಲೆ ಏರಿಕೆ ಮಾಡಿ ಜನ ಸಾಮಾನ್ಯರ ಮೇಲೆ ಬರೆ ಹಾಕಿದ್ದಾರೆ. ಅವೈಜ್ಞಾನಿಕವಾಗಿ ದರ ಏರಿಕೆ ಮಾಡಲಾಗಿದೆ. ಕಳೆದ ಮೂರೂವರೆ ವರ್ಷದ ಇವರ ಸಾಧನೆ ದರ ಏರಿಕೆ ಮಾತ್ರ. ಪೆಟ್ರೋಲ್ ಮೇಲೆ, ಆಲ್ಕೋಹಾಲ್ ಮೇಲೆ, ಹಾಲಿನ ಮೇಲೆ, ನೀರಿನ ಮೇಲೆ, ಜಂಗಲ್ ಸಫಾರಿ ಮೇಲೆ, ವಿವಿಧ ಶುಲ್ಕಗಳು, ಆಸ್ಪತ್ರೆಗಳಲ್ಲಿ ಶುಲ್ಕ, ಬಸ್ ಟಿಕೆಟ್ ಮೇಲೆ ಸೇರಿ ಹಲವಾರು ವಸ್ತುಗಳ ಮೇಲೆ ದರ ಏರಿಸಿದ್ದಾರೆ. ಬಸ್ ಟಿಕೆಟ್ 45%ರಷ್ಟು, ಹಾಲಿನ ಮೇಲೆ 8 ರೂ, ಮೊಸರು 14 ರೂ, ತುಪ್ಪದ ದರ 180 ರೂ ಏರಿಸಿದ್ದಾರೆ. ಒಂದು ಲೋಟ ಹಾಲು ಕುಡಿಯಲು ಸಹ ಜನ ಯೋಚನೆ ಮಾಡುವಂತಾಗಿದೆ" ಎಂದು ಆಕ್ರೋಶ ಹೊರಹಾಕಿದರು.
"ರೈತರಿಗೆ ಸರ್ಕಾರ ಸಹಾಯ ಧನ ಕೊಡಲಿ, ಅದರ ಬದಲು ಜನರ ಮೇಲೇಕೆ ಹೊರೆ ಹಾಕುತ್ತೀರಿ? ಬಸ್ ಟಿಕೆಟ್ ದರ ಇಳಿಸಿ. ದರ ಏರಿಕೆಗೆ ಕಾರಣ ಶಕ್ತಿ ಯೋಜನೆ ಬಾಕಿ ಕೊಡುವುದು. ಸಾರಿಗೆ ನಿಗಮಗಳಿಗೆ ಹಣ ಕೊಡದೇ ಬಸ್ಗಳಿಗೆ ಡೀಸಲ್ ಸಹ ಹಾಕಿಸಲು ಆಗುತ್ತಿರಲಿಲ್ಲ. ಸಿಎಂ ಅವರೇ ಡೀಸೆಲ್ ಹಾಕಿಸಲೂ ಹಣ ಇಲ್ಲ ಅಂತ ಒಪ್ಪಿಕೊಂಡಿದ್ದಾರೆ. ರಾಜ್ಯ ಈ ದುಸ್ಥಿತಿಗೆ ಬರಲು ಕಾಂಗ್ರೆಸ್ ಸರ್ಕಾರ ಕಾರಣ. ಜನ ದೀಪಾವಳಿ ಹಬ್ಬವನ್ನು ಕುಟುಂಬ ಸಮೇತ ಆಚರಿಸಲಾಗುತ್ತಿಲ್ಲ. ಜನರ ಮೇಲೆ ಸರ್ಕಾರ ದರ ಏರಿಕೆಯ ಗದಾಪ್ರಹಾರ ನಡೆಸಿದೆ. ಸರ್ಕಾರಿ ಶಾಲೆಗಳನ್ನು ದತ್ತು ಕೊಡಲು ಮುಂದಾಗಿದ್ದಾರೆ. ಶಿಕ್ಷಣಕ್ಕೂ ಹಣ ಕೊಡದ ಸರ್ಕಾರ ಇದು. ಸಿಎಂ ಅವರ ಮಗಳು ಶಿಕ್ಷಣ ವ್ಯವಸ್ಥೆ ಸರಿ ಇಲ್ಲ ಅಂದಿದ್ದಾರೆ. ಸಿಎಸ್ಆರ್ ಫಂಡ್ ಎತ್ತಿ ಶಿಕ್ಷಣಕ್ಕೆ ಕೊಡುತ್ತಿದ್ದಾರೆ. ರಾಜ್ಯದಲ್ಲಿ ಯಾವತ್ತೂ ಇಂಥ ಸ್ಥಿತಿ ಬಂದಿರಲಿಲ್ಲ. ರಾಜ್ಯದಲ್ಲಿ ಆರ್ಥಿಕ ತುರ್ತು ಪರಿಸ್ಥಿತಿ ಇದೆ" ಎಂದು ಹೇಳಿದರು.
"ನವೆಂಬರ್ 11 ರಂದು ಇಡೀ ದಿನ ಪ್ರತಿಭಟನೆ ನಡೆಸುತ್ತೇವೆ. ದರ ಏರಿಕೆ ಖಂಡಿಸಿ ಬಿಜೆಪಿಯಿಂದ ಒಂದು ದಿನದ ಪ್ರತಿಭಟನೆ ನಡೆಯಲಿದೆ. ಫ್ರೀಡಂ ಪಾರ್ಕ್ನಲ್ಲಿ ಇಡೀ ದಿನ ಕೂತು ಧರಣಿ ನಡೆಸುತ್ತೇವೆ. ಈ ಪ್ರತಿಭಟನೆಯಲ್ಲಿ ನಮ್ಮೆಲ್ಲ ನಾಯಕರು ಭಾಗವಹಿಸುತ್ತಾರೆ. ದರ ಏರಿಕೆ ವಾಪಸ್ಗೆ ಆಗ್ರಹಿಸಿ ಪ್ರತಿಭಟನೆ ಮಾಡುತ್ತೇವೆ. ಸರ್ಕಾರಕ್ಕೆ ಎಚ್ಚರಿಕೆ ಕೊಡುತ್ತೇವೆ. ಜಿಲ್ಲಾ ಹಂತಗಳಲ್ಲೂ ಪ್ರತಿಭಟನೆ ಮುಂದುವರೆಯಲಿದೆ" ಎಂದರು.