ಹುಬ್ಬಳ್ಳಿ, ನ.08 (DaijiworldNews/AA): ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ನಂತರ, ಕಳೆದ ಮೂರು ವರ್ಷಗಳಿಂದ ನಿರಂತರವಾಗಿ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿ, ಜನಸಾಮಾನ್ಯರ ಮೇಲೆ ಹೊರೆ ಹೇರಲಾಗುತ್ತಿದೆ ಎಂದು ಕೇಂದ್ರ ಶಿಕ್ಷಣ ಸಚಿವ ಪ್ರಹ್ಲಾದ್ ಜೋಶಿ ಆರೋಪಿಸಿದ್ದಾರೆ.

ಹುಬ್ಬಳ್ಳಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಖಾತ್ರಿ ಯೋಜನೆಗಳ ಹೆಸರಲ್ಲಿ, ಒಂದು ಕಡೆ ಜನರಿಗೆ ನೀಡಿ, ಮತ್ತೊಂದು ಕಡೆ ಜನರಿಂದ ಪಡೆದುಕೊಳ್ಳುವ ಕೆಲಸ ಮಾಡಲಾಗುತ್ತಿದೆ. ಹಾಲು, ಮೊಸರು, ಪೆಟ್ರೋಲ್, ಡೀಸೆಲ್, ಬಸ್ ಪ್ರಯಾಣದರ ಸೇರಿದಂತೆ, ಇನ್ನಿತರ ವಸ್ತುಗಳ ದರವನ್ನು ಪದೇ ಪದೇ ಹೆಚ್ಚಿಸಲಾಗುತ್ತಿದೆ. ಇದರ ಜೊತೆಗೆ, ಜಾನುವಾರುಗಳಿಗೆ ನೀಡುವ ಮೇವಿನ ದರವನ್ನು ಹೆಚ್ಚಿಸಲಾಗಿದೆ" ಎಂದು ಹೇಳಿದರು.
"ದೇಶದಲ್ಲಿ, ಮತದಾರರ ತೀವ್ರ ಪರಿಷ್ಕರಣೆ-ಎಸ್ಐಆರ್, ವಿದ್ಯುನ್ಮಾನ ಮತಯಂತ್ರಗಳು ಬರುವ, ಮೂರ್ನಾಲ್ಕು ದಶಕಗಳಿಗೂ ಅಧಿಕ ಸಮಯದಿಂದ, ತಮಿಳುನಾಡು, ಪಶ್ಚಿಮ ಬಂಗಾಳ, ಉತ್ತರ ಪ್ರದೇಶ ಸೇರಿದಂತೆ ಹಲವು ರಾಜ್ಯಗಳಲ್ಲಿ, ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲು ಸಾಧ್ಯವಾಗಿಲ್ಲ. ಆದರೂ ಎಸ್ಐಆರ್ ಪ್ರಕ್ರಿಯೆಯನ್ನು ವಿರೋಧಿಸಿ, ಜನರಲ್ಲಿ ತಪ್ಪು ಸಂದೇಶ ನೀಡುವ ಕೆಲಸ ಮಾಡಲಾಗುತ್ತಿದೆ" ಎಂದು ತಿಳಿಸಿದರು.
"ಮತದಾರರ ವಿಶೇಷ ಸಮಗ್ರ ಕಾರ್ಯವನ್ನು, ದೇಶದಲ್ಲಿ ಕಾಲ ಕಾಲಕ್ಕೆ ನಡೆಸಿಕೊಂಡು ಬರಲಾಗುತ್ತಿದೆ. ಹೀಗಿದ್ದರೂ ಕಾಂಗ್ರೆಸ್ ಪಕ್ಷ ಅಪಪ್ರಚಾರ ನಡೆಸುತ್ತಿದೆ. ಇದು ಒಳ್ಳೆಯ ಬೆಳವಣಿಗೆಯಲ್ಲ. ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಮಾಡಿಕೊಳ್ಳುವವರು ಅಗತ್ಯ ದಾಖಲೆಗಳೊಂದಿಗೆ ಚುನಾವಣಾ ಆಯೋಗಕ್ಕೆ ಮಾಹಿತಿ ನೀಡಬಹುದು" ಎಂದರು.
"ದೇಶದಲ್ಲಿ ನಿಗದಿತ ನಿಯಮದಂತೆ, ಎಥೆನಾಲ್ ಮಿಶ್ರಣದ ಗುರಿ ಇದೆ. ಹೀಗಿದ್ದರೂ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ, ಈ ವಿಷಯದಲ್ಲಿ ಅಪಪ್ರಚಾರ ಮಾಡುತ್ತಿದೆ. ಪರೀಕ್ಷೆಗೆ ಸಂಗ್ರಹಿಸಿದ 63 ಮಾದರಿಗಳ ಪೈಕಿ, ಪ್ರಕಟಿಸಿರುವ 14 ಫಲಿತಾಂಶಗಳಲ್ಲಿ 11 ಮಾದರಿಗಳಲ್ಲಿ, ಎಥೆನಾಲ್ ಮಿಶ್ರಣದ ಪ್ರಮಾಣ ಶೇಕಡ 20ರ ಮಿತಿಯೊಳಗೇ ಇದೆ. ಪೆಟ್ರೋಲ್ ಅಥವಾ ಡೀಸೆಲ್ ಅನ್ನು ಪರೀಕ್ಷೆ ಮಾಡಬೇಕಾದರೆ, ನಿಗದಿತ ಮಾನದಂಡದಂತೆ ಪರೀಕ್ಷೆ ನಡೆಸಬೇಕು" ಎಂದು ನುಡಿದರು.