ಗೋವಾ, ನ.09 (DaijiworldNews/TA): ಗೋವಾದ ಕಡಲತೀರದಲ್ಲಿ ತೀರಕ್ಕೆ ಕೊಚ್ಚಿ ಬಂದಿದ್ದ ತಿಮಿಂಗಿಲವೊಂದನ್ನು ಸ್ವಯಂಸೇವಕರು ಸಾಹಸಮಯ ಕಾರ್ಯಾಚರಣೆ ನಡೆಸಿ ರಕ್ಷಿಸಿ ಮತ್ತೆ ಆಳ ಸಮುದ್ರಕ್ಕೆ ಬಿಡುವಲ್ಲಿ ಯಶಸ್ವಿಯಾಗಿದ್ದಾರೆ. ಭಾನುವಾರ ಮಧ್ಯಾಹ್ನ ಗೋವಾದ ಮಾಂಡ್ರೆಮ್ ಬೀಚ್ನಲ್ಲಿ ಈ ತಿಮಿಂಗಿಲ ಪತ್ತೆಯಾಗಿತ್ತು. ತಕ್ಷಣ ಕಾರ್ಯಪ್ರವೃತ್ತರಾದ ಜಲರಕ್ಷಣಾ ಸೇವಾ ಸಂಸ್ಥೆ ದೃಷ್ಟಿ ಲೈಫ್ಸೇವರ್ ಗ್ರೂಪ್ನ ಸ್ವಯಂಸೇವಕರು ರಕ್ಷಣಾ ಕಾರ್ಯಾಚರಣೆ ಆರಂಭಿಸಿದರು.

ರಕ್ಷಣಾ ಕಾರ್ಯಾಚರಣೆಯ ಚಿತ್ರಗಳು ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಗಮನ ಸೆಳೆದಿವೆ. ಸ್ವಯಂಸೇವಕರು ತಿಮಿಂಗಿಲವನ್ನು ದೊಡ್ಡ ಬಟ್ಟೆಯ ಹಾಳೆಗಳಲ್ಲಿ ಸುತ್ತಿ ಸಮುದ್ರದತ್ತ ಎಳೆದುಕೊಂಡು ಹೋಗುತ್ತಿರುವುದು ಕಂಡುಬಂದಿದೆ. ರಕ್ಷಣಾ ಕಾರ್ಯಾಚರಣೆ ನಡೆಯುವ ವೇಳೆ ಅದರ ದೇಹ ತೇವವಾಗಿರುವಂತೆ ನಿರಂತರವಾಗಿ ನೀರನ್ನು ಸಿಂಪಡಿಸಲಾಯಿತು.
ಬಳಿಕ ತಿಮಿಂಗಿಲವನ್ನು ಸುರಕ್ಷಿತವಾಗಿ ದೋಣಿಯ ಮೂಲಕ ಆಳವಾದ ಸಮುದ್ರದ ನೀರಿಗೆ ಕೊಂಡೊಯ್ದು ಬಿಡುಗಡೆ ಮಾಡಲಾಯಿತು. ಸಮುದ್ರಕ್ಕೆ ಮರಳಿದ ತಿಮಿಂಗಿಲ ಈಜಿಕೊಂಡು ಹೋಗುತ್ತಿರುವ ದೃಶ್ಯ ರಕ್ಷಣಾ ಕಾರ್ಯಾಚರಣೆಯ ಯಶಸ್ಸಿಗೆ ಸಾಕ್ಷಿಯಾಗಿದೆ. ಸಮುದ್ರ ಸಸ್ತನಿಗಳ ರಕ್ಷಣೆಯಲ್ಲಿ ತರಬೇತಿ ಪಡೆದಿರುವ ದೃಷ್ಟಿ ಲೈಫ್ಸೇವರ್ ತಂಡದ ಸದಸ್ಯರು ತ್ವರಿತವಾಗಿ ಕಾರ್ಯಾಚರಣೆ ನಡೆಸಿ ತಿಮಿಂಗಿಲದ ಜೀವ ಉಳಿಸಿದ್ದಾರೆ.
ಇದೇ ರೀತಿಯ ಮತ್ತೊಂದು ಘಟನೆ ಕೆಲವು ತಿಂಗಳ ಹಿಂದೆ ಮುಂಬೈನ ಬಾಂದ್ರಾ ಕರಾವಳಿಯಲ್ಲಿ ನಡೆದಿತ್ತು. ಸುಮಾರು 26 ಅಡಿ ಉದ್ದದ ಮರಿ ಹಂಪ್ಬ್ಯಾಕ್ ತಿಮಿಂಗಿಲವೊಂದು ಬಂಡೆಗಳಿಂದ ಕೂಡಿದ ಕರಾವಳಿಯಲ್ಲಿ ತೀರಕ್ಕೆ ಕೊಚ್ಚಿ ಬಂದಿತ್ತು. ಆರಂಭದಲ್ಲಿ ತಿಮಿಂಗಿಲ ಜೀವಂತವಾಗಿರುವ ಲಕ್ಷಣಗಳು ಕಂಡುಬಂದ ಹಿನ್ನೆಲೆಯಲ್ಲಿ ಅಧಿಕಾರಿಗಳು ತುರ್ತು ರಕ್ಷಣಾ ಕಾರ್ಯಾಚರಣೆ ಆರಂಭಿಸಿದ್ದರು. ಆದರೆ ಹಲವು ಪ್ರಯತ್ನಗಳ ಹೊರತಾಗಿಯೂ ಅದನ್ನು ಉಳಿಸಲು ಸಾಧ್ಯವಾಗಿರಲಿಲ್ಲ. ಮುಂಬೈನಲ್ಲಿ ನಡೆದ ದುರ್ಘಟನೆಯ ಬೆನ್ನಲ್ಲೇ ಗೋವಾದಲ್ಲಿ ತಿಮಿಂಗಿಲವನ್ನು ಯಶಸ್ವಿಯಾಗಿ ರಕ್ಷಿಸಿ ಸಮುದ್ರಕ್ಕೆ ಮರಳಿಸಿರುವುದು ಸಮುದ್ರ ಜೀವಿಗಳ ಸಂರಕ್ಷಣೆಯ ಮಹತ್ವವನ್ನು ಮತ್ತೊಮ್ಮೆ ನೆನಪಿಸಿದೆ.