ಬಳ್ಳಾರಿ, ನ.09 (DaijiworldNews/TA): ಶಾಸಕ ಜನಾರ್ದನ ರೆಡ್ಡಿ ಮಾಲೀಕತ್ವದ ಜಿ ಸ್ಕ್ವೇರ್ ನಿರ್ಮಾಣ ಸಂಸ್ಥೆ ಒತ್ತುವರಿ ಮಾಡಿಕೊಂಡಿದ್ದ ಸರ್ಕಾರಿ ಜಾಗವನ್ನು ಬಳ್ಳಾರಿ ಜಿಲ್ಲಾಡಳಿತ ತೆರವುಗೊಳಿಸಿದೆ. ಸಂಸ್ಥೆ ಒತ್ತುವರಿ ಮಾಡಿಕೊಂಡಿದ್ದ 1 ಎಕರೆ 25 ಗುಂಟೆ ಸೇರಿದಂತೆ ಒಟ್ಟು 4 ಎಕರೆ ಸರ್ಕಾರಿ ಜಾಗವನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ಸರ್ಕಾರಿ ಜಾಗವನ್ನು ಒತ್ತುವರಿ ಮಾಡಿಕೊಂಡು ಸುಸಜ್ಜಿತ ಕಾಂಪೌಂಡ್ ನಿರ್ಮಿಸಲಾಗಿತ್ತು. ಜಿ ಸ್ಕ್ವೇರ್ ಸಂಸ್ಥೆಯ ಒತ್ತುವರಿ ಮಾತ್ರವಲ್ಲದೆ, ಇತರರು ಅತಿಕ್ರಮಿಸಿಕೊಂಡಿದ್ದ ಜಾಗವನ್ನೂ ತೆರವುಗೊಳಿಸಲಾಗಿದೆ. ಬಳ್ಳಾರಿ ಅಪರ ಜಿಲ್ಲಾಧಿಕಾರಿ ಜಬೇರ್ ಅಹ್ಮದ್ ಮತ್ತು ಉಪವಿಭಾಗಾಧಿಕಾರಿ ರಾಜೇಶ್ ನೇತೃತ್ವದಲ್ಲಿ ತೆರವು ಕಾರ್ಯಾಚರಣೆ ನಡೆಯಿತು.
ಇನ್ನು ತೆರವು ಕಾರ್ಯಾಚರಣೆ ಪೂರ್ಣಗೊಂಡ ಬೆನ್ನಲ್ಲೇ ಕಾಂಪೌಂಡ್ ಗೋಡೆಗಳಿಗೆ ಅಳವಡಿಸಲಾಗಿದ್ದ ಕಬ್ಬಿಣದ ಗ್ರಿಲ್ಗಳನ್ನು ಸಾರ್ವಜನಿಕರು ಹೊತ್ತೊಯ್ದಿರುವ ಘಟನೆ ನಡೆದಿದೆ.