ಮಂಡ್ಯ, ನ.10 (DaijiworldNews/TA): ದೇಶದೆಲ್ಲೆಡೆ ದೀಪಾವಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದ್ದರೆ, ಮಂಡ್ಯ ಜಿಲ್ಲೆಯ ಮೇಲುಕೋಟೆಯಲ್ಲಿ ಮಾತ್ರ ಒಂದು ಸಮುದಾಯ ಈ ಹಬ್ಬವನ್ನು ಕರಾಳ ದಿನವಾಗಿ ಸ್ಮರಿಸುತ್ತದೆ. ಸುಮಾರು 200 ವರ್ಷಗಳಿಂದ ನಡೆದುಕೊಂಡು ಬರುತ್ತಿರುವ ಈ ವಿಶಿಷ್ಟ ಸಂಪ್ರದಾಯಕ್ಕೆ ಟಿಪ್ಪು ಸುಲ್ತಾನ್ ಆಳ್ವಿಕೆಯ ಕಾಲದಲ್ಲಿ ನಡೆದಿತ್ತೆನ್ನಲಾದ ಭೀಕರ ಹತ್ಯಾಕಾಂಡದ ನೆನಪು ಕಾರಣವಾಗಿದೆ.

ಮಂಡ್ಯಂ ಅಯ್ಯಂಗಾರ್ ಸಮುದಾಯದ ಕುಟುಂಬಗಳು ದೀಪಾವಳಿಯನ್ನು ಸಂಭ್ರಮದಿಂದ ಆಚರಿಸದೆ ಶೋಕದಿನವನ್ನಾಗಿ ಪಾಲಿಸಿಕೊಂಡು ಬರುತ್ತಿವೆ. ಇತಿಹಾಸದ ಉಲ್ಲೇಖಗಳ ಪ್ರಕಾರ, ಟಿಪ್ಪು ಸುಲ್ತಾನ್ ಆಳ್ವಿಕೆಯ ಸಂದರ್ಭದಲ್ಲಿ ನರಕ ಚತುರ್ದಶಿಯಂದು ಶ್ರೀರಂಗಪಟ್ಟಣದ ಕಾವೇರಿ ನದಿ ತೀರಕ್ಕೆ ದೀಪಾವಳಿ ಆಚರಿಸಲು ತೆರಳಿದ್ದ 800ಕ್ಕೂ ಹೆಚ್ಚು ಮಂಡ್ಯಂ ಅಯ್ಯಂಗಾರ್ ಸಮುದಾಯದವರನ್ನು ಸೈನಿಕರು ಹತ್ಯೆ ಮಾಡಿದ್ದರು ಎನ್ನಲಾಗಿದೆ. ಈ ದುರಂತದ ಬಳಿಕ ಸಮುದಾಯದವರು ದೀಪಾವಳಿಯ ಸಂಭ್ರಮವನ್ನು ತ್ಯಜಿಸಿ, ಹತ್ಯೆಗೀಡಾದ ತಮ್ಮ ಪೂರ್ವಜರ ಸ್ಮರಣಾರ್ಥ ಶೋಕಾಚರಣೆಯನ್ನು ಆರಂಭಿಸಿದರು ಎಂದು ಹೇಳಲಾಗುತ್ತದೆ. ಇಂದಿಗೂ ಈ ಸಂಪ್ರದಾಯವನ್ನು ಕಟ್ಟುನಿಟ್ಟಾಗಿ ಪಾಲಿಸುವ ಕುಟುಂಬಗಳು ದೀಪಾವಳಿಯಂದು ಮನೆಯಲ್ಲಿ ದೀಪ ಹಚ್ಚುವುದಿಲ್ಲ, ಪಟಾಕಿ ಸಿಡಿಸುವುದಿಲ್ಲ. ಬದಲಾಗಿ ತಮ್ಮ ಪೂರ್ವಜರಿಗೆ ನಡೆದ ದುರಂತವನ್ನು ಸ್ಮರಿಸಿ ಮೌನವಾಗಿ ದಿನ ಕಳೆಯುತ್ತಾರೆ.
ದಿವಂಗತ ತಮಿಳುನಾಡು ಮುಖ್ಯಮಂತ್ರಿ ಜೆ. ಜಯಲಲಿತಾ ಅವರ ಕುಟುಂಬವೂ ಮಂಡ್ಯಂ ಅಯ್ಯಂಗಾರ್ ಸಮುದಾಯಕ್ಕೆ ಸೇರಿದ್ದು, ಈ ಸಂಪ್ರದಾಯದೊಂದಿಗೆ ಸಂಬಂಧ ಹೊಂದಿದೆ ಎಂದು ಉಲ್ಲೇಖಿಸಲಾಗುತ್ತದೆ. ಕಾಲಕ್ರಮೇಣ ಮೇಲುಕೋಟೆಯಿಂದ ಹಲವು ಕುಟುಂಬಗಳು ಬೇರೆಡೆಗೆ ವಲಸೆ ಹೋಗಿದ್ದರೂ, ದೀಪಾವಳಿಯ ಶೋಕಾಚರಣೆಯ ಸಂಪ್ರದಾಯವನ್ನು ಇಂದಿಗೂ ಮುಂದುವರಿಸಿಕೊಂಡು ಬಂದಿವೆ. ಹೀಗೆ ದೇಶದೆಲ್ಲೆಡೆ ಬೆಳಕಿನ ಹಬ್ಬದ ಸಂಭ್ರಮ ಮನೆಮಾಡಿರುವಾಗ, ಮೇಲುಕೋಟೆಯ ಈ ಸಮುದಾಯ ಮಾತ್ರ ತಮ್ಮ ಪೂರ್ವಜರ ನೆನಪಿನಲ್ಲಿ ಕತ್ತಲೆಯಲ್ಲೇ ದೀಪಾವಳಿಯನ್ನು ಕಳೆಯುತ್ತದೆ.