ಮುಂಬೈ, ಜ.04 (Daijiworld News/PY) : ಸಂಪುಟದಲ್ಲಿ ಪ್ರಮುಖ ಸ್ಥಾನ ದೊರಕಿಲಿಲ್ಲ ಎಂದು ಅಸಮಾಧಾನಗೊಂಡ ಮಹಾರಾಷ್ಟ್ರ ಉದ್ಧವ್ ಠಾಕ್ರೆ ನೇತೃತ್ವದ ವಿಕಾಸ್ ಅಘಾಡಿ ಸರ್ಕಾರದ ಸಚಿವ ಸ್ಥಾನಕ್ಕೆ ಅಬ್ದುಲ್ ಸತ್ತಾರ್ ಅವರು ರಾಜೀನಾಮೆ ನೀಡಿದ್ದಾರೆ ಎಂದು ವರದಿ ತಿಳಿಸಿದೆ.
ಅಬ್ದುಲ್ ಸತ್ತಾರ್ ಅವರು ಔರಂಗಬಾದ್ ಜಿಲ್ಲೆಯ ಸಿಲ್ಲೋದ್ ಕ್ಷೇತ್ರದ ಶಾಸಕರಾಗಿದ್ದರು. ಅಲ್ಲದೇ ವಿಧಾನಸಭಾ ಚುನಾವಣೆಗೂ ಮುನ್ನ ಕಾಂಗ್ರೆಸ್ ಪಕ್ಷ ತೊರೆದು ಶಿವಸೇನೆಗೆ ಸತ್ತಾರ್ ಸೇರ್ಪಡೆಗೊಂಡಿದ್ದರು. ಇತ್ತೀಚೆಗೆ ಸತ್ತಾರ್ ರಾಜ್ಯ ಖಾತೆ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದರು.
ಆದರೆ, ಸಚಿವ ಸತ್ತಾರ್ ರಾಜೀನಾಮೆ ಬಗ್ಗೆ ಮುಖ್ಯಮಂತ್ರಿ ಕಚೇರಿಯಲ್ಲಾಗಲಿ, ರಾಜಭವನದಲ್ಲಾಗಲಿ ಖಚಿತಪಡಿಸಿಲ್ಲ. ಅಲ್ಲದೇ ಸ್ವತಃ ಸತ್ತಾರ್ ಕೂಡಾ ರಾಜೀನಾಮೆ ವಿಚಾರವಾಗಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ವರದಿ ತಿಳಿಸಿದೆ.
ಶಿವಸೇನಾದ ಹಿರಿಯ ಮುಖಂಡರಿಗೂ ಸತ್ತಾರ್ ರಾಜೀನಾಮೆ ಬಗ್ಗೆ ತಿಳಿದಿಲ್ಲ. ಶಿವಸೇನಾದ ಅನಿಲ್ ದೇಸಾಯಿ ಅವರು ಸತ್ತಾರ್ ರಾಜೀನಾಮೆ ಕೊಟ್ಟಿಲ್ಲ ಎಂದು ತಿಳಿಸಿದ್ದಾರೆ. ಶಿವಸೇನಾದ ಅರ್ಜುನ್ ಖೋಟ್ಕರ್ ಅವರನ್ನು ಸತ್ತಾರ್ ಬಳಿ ಚರ್ಚೆ ನಡೆಸಲು ಕಳುಹಿಸಿಕೊಟ್ಟಿದೆ ಎಂದು ವರದಿ ವಿವರಿಸಿದೆ.