ನವದೆಹಲಿ, ನ.10 (DaijiworldNews/AK): ಕಾಂಗ್ರೆಸ್ ಹಿರಿಯ ನಾಯಕಿ ಸೋನಿಯಾ ಗಾಂಧಿ ಅವರ ಆತ್ಮಕಥೆ ‘Belonging: A Journey of Love’ ಪುಸ್ತಕ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ತಮ್ಮ ಆತ್ಮಕಥೆಯಲ್ಲಿ ಸೋನಿಯಾ ಅವರು ಹಲವಾರು ಕೌತುಕದ ವಿಚಾರಗಳನ್ನು ಬಹಿರಂಗಪಡಿಸಿದ್ದಾರೆ. ತಮ್ಮ ಮೊದಲ ಮಗುವಿನ ಬಗ್ಗೆಯೂ ಪುಸ್ತಕದಲ್ಲಿ ಉಲ್ಲೇಖಿಸಿದ್ದಾರೆ.

ಮಾಜಿ ಪ್ರಧಾನಿ ರಾಜೀವ್ ಗಾಂಧಿ ಮತ್ತು ಸೋನಿಯಾ ಗಾಂಧಿ ದಂಪತಿಗೆ ರಾಹುಲ್ ಗಾಂಧಿಗೂ ಮುನ್ನ ಮಗುವೊಂದು ಜನಿಸಿತ್ತು. ಆದರೆ, ಆ ಮಗು ಹುಟ್ಟಿದ ಕೆಲವೇ ಕ್ಷಣಗಳಲ್ಲಿ ಮೃತಪಟ್ಟಿತು ಎಂಬ ವಿಚಾರವನ್ನು ಸೋನಿಯಾ ಅವರು ತಿಳಿಸಿದ್ದಾರೆ. ‘ನಾವು ಮೊದಲ ಮಗುವನ್ನು ತುಂಬಾ ಪ್ರೀತಿಸುತ್ತಿದ್ದೆವು.. ಆದರೆ, ಹುಟ್ಟಿದ ಕೆಲವೇ ಹೊತ್ತಲ್ಲಿ ನಮ್ಮ ಮೊದಲ ಮಗು ಮೃತಪಟ್ಟಿತು’ ಎಂದು ಬರೆದುಕೊಂಡಿದ್ದಾರೆ.
ಗಾಂಧಿ ಕುಟುಂಬದಲ್ಲಿ 1969ರ ಜನವರಿಯಲ್ಲಿ ಈ ದುರಂತ ಸಂಭವಿಸಿತು. ತಮ್ಮ ಮೊಮ್ಮಗು ಮೃತಪಟ್ಟ ವಿಷಯ ತಿಳಿದ ಇಂದಿರಾ ಗಾಂಧಿ ಅವರು ಸೊಸೆ ಸೋನಿಯಾರನ್ನು ಅಪ್ಪಿಕೊಂಡು ಸಂತೈಸಿದ್ದರು.
ಸೋನಿಯಾ ಅವರ ಮನೆಯಲ್ಲಿ ಮೊದಲ ಮಗುವಿನ ಆಗಮನದ ಸಂಭ್ರಮ ಮನೆ ಮಾಡಿತ್ತು. ಆದರೆ, ಆ ಖುಷಿ ಹೆಚ್ಚು ಕಾಲ ಉಳಿಯಲಿಲ್ಲ. ನಿಗದಿತ ದಿನಾಂಕಕ್ಕಿಂತ 2 ತಿಂಗಳ ಮೊದಲೇ ಸೋನಿಯಾ ಗಾಂಧಿ ಅವರಿಗೆ ಹೆರಿಗೆ ನೋವು ಕಾಣಿಸಿಕೊಂಡಿತು. 1969ರ ಜ.18 ರಂದು ಸೋನಿಯಾ ಗಂಡು ಮಗುವಿಗೆ ಜನ್ಮ ನೀಡಿದರು. ಅಕಾಲಿಕವಾಗಿ ಜನಿಸಿದ್ದರೂ, ಆ ನವಜಾತ ಶಿಶು ಆರೋಗ್ಯವಾಗಿಯೇ ಇತ್ತು.
ಮೊದಲ ಮಗನನ್ನು ಕಳೆದುಕೊಂಡು ರಾಜೀವ್ ಗಾಂಧಿ ಕೂಡ ಕಣ್ಣೀರು ಹಾಕಿದ್ದರು. ಆ ಸಂದರ್ಭದಲ್ಲಿ ವಿದೇಶಿ ಪ್ರವಾಸದಲ್ಲಿದ್ದ ಇಂದಿರಾ ಗಾಂಧಿ ತಮ್ಮ ಪ್ರವಾಸ ಮೊಟಕುಗೊಳಿಸಿ ಆಸ್ಪತ್ರೆಗೆ ಧಾವಿಸಿದ್ದರು. ಇಂದಿರಾ ಗಾಂಧಿ ಕೂಡ ದುಃಖಿತರಾಗಿದ್ದರು.
ಅದೇ ವರ್ಷದಲ್ಲಿ ಸೋನಿಯಾ ಮತ್ತೆ ಗರ್ಭಿಣಿಯಾದರು. ಆದರೆ, ಈ ವಿಷಯವು ಕುಟುಂಬದಲ್ಲಿ ಸಂಭ್ರಮಕ್ಕಿಂತ ಹೆಚ್ಚಾಗಿ ಆತಂಕವನ್ನೇ ಉಂಟುಮಾಡಿತು. ಈ ಗರ್ಭಧಾರಣೆಯ ಫಲವಾಗಿ, 1970ರ ಜೂನ್ 19ರಂದು ರಾಹುಲ್ ಗಾಂಧಿ ಜನಿಸಿದರು.