ಬೆಂಗಳೂರು,ನ.10 (DaijiworldNews/AK): ರಾಜ್ಯದಲ್ಲಿ ಬರ ಪರಿಹಾರ ವಿತರಣೆ ಕುರಿತಂತೆ ಹರಡುತ್ತಿರುವ ಅಪಪ್ರಚಾರ ಹಾಗೂ ವದಂತಿಗಳಿಗೆ ಕರ್ನಾಟಕ ಸರ್ಕಾರ ತೆರೆ ಎಳೆದಿದೆ.

ರಾಜ್ಯದ ರೈತ ಬಾಂಧವರಲ್ಲಿ ಬರ ಪರಿಹಾರದ ಕುರಿತು ಯಾವುದೇ ರೀತಿಯ ಗೊಂದಲ ಬೇಡ. ಪ್ರತಿಯೊಬ್ಬ ಅರ್ಹ ರೈತನಿಗೂ ಸರ್ಕಾರ ಕನಿಷ್ಠ 5,000 ರೂಪಾಯಿ ಪರಿಹಾರ ನೀಡುವುದು ನಿಶ್ಚಿತ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸ್ಪಷ್ಟ ಭರವಸೆ ನೀಡಿದ್ದಾರೆ. ಮೊದಲ ಕಂತಿನಲ್ಲಿ ಬಿಡುಗಡೆಯಾಗಿರುವ ಹಣವೇ ಅಂತಿಮವಲ್ಲ ಎಂದಿರುವ ಅವರು, ರೈತರಿಗೆ ಪೂರ್ಣಪ್ರಮಾಣದ ಪರಿಹಾರ ತಲುಪಿಸಲು ಸರ್ಕಾರ ಬದ್ಧವಾಗಿದೆ ಎಂದು ತಿಳಿಸಿದ್ದಾರೆ.
ಕೇಂದ್ರ ಸರ್ಕಾರದ ನಿಯಮಾವಳಿಗಳಿಗಿಂತ ಹೆಚ್ಚಾಗಿ ರಾಜ್ಯ ಸರ್ಕಾರವೇ ತನ್ನ ಸ್ವಂತ ನಿಧಿಯಿಂದ ಹಣ ಭರಿಸಿ ರೈತರ ನೆರವಿಗೆ ಧಾವಿಸಿದೆ ಎಂದು ಸಿಎಂ ವಿವರಣೆ ನೀಡಿದ್ದಾರೆ.
ಕೇಂದ್ರದ SDRF ಮತ್ತು NDRF ಮಾರ್ಗಸೂಚಿಗಳ ಪ್ರಕಾರ ಮಳೆಯಾಶ್ರಿತ ಬೆಳೆಗೆ 1,500 ರೂ. ನೀರಾವರಿ ಬೆಳೆಗೆ 2,600 ರೂ. ಹಾಗೂ ಬಹುವಾರ್ಷಿಕ ಬೆಳೆಗಳಿಗೆ 3,200 ರೂ. ಕನಿಷ್ಠ ಪರಿಹಾರ ನಿಗದಿಯಾಗಿದೆ. ಆದರೆ, ರಾಜ್ಯ ಸರ್ಕಾರವು ಈ ಮೂರೂ ವರ್ಗದ ಬೆಳೆಗಳಿಗೂ ಕನಿಷ್ಠ 5,000 ರೂಪಾಯಿ ಬರ ಪರಿಹಾರವನ್ನು ನೀಡಲು ತೀರ್ಮಾನಿಸಿದೆ. ನಿಗದಿತ ನಿಯಮಕ್ಕಿಂತ ಹೆಚ್ಚಾಗುವ ಈ ಪೂರ್ಣ ಹೆಚ್ಚುವರಿ ವೆಚ್ಚವನ್ನು ರಾಜ್ಯ ಸರ್ಕಾರವೇ ವಹಿಸಿಕೊಳ್ಳಲಿದೆ ಎಂದು ಹೇಳಿದ್ದಾರೆ.
ಮೊದಲ ಕಂತಿನಲ್ಲಿ 2,000 ರೂ. ಅಥವಾ 2,500 ರೂ. ಪಡೆದಿರುವ ರೈತರಿಗೆ ಬಾಕಿ ಉಳಿದಿರುವ ಹಣವನ್ನು ಮುಂದಿನ ಕಂತುಗಳಲ್ಲಿ ತಕ್ಷಣವೇ ಖಾತೆಗಳಿಗೆ ಪಾವತಿಸಲಾಗುತ್ತದೆ. ಬೆಳೆ ನಷ್ಟದ ಪ್ರಮಾಣವನ್ನು ಆಧರಿಸಿ ಅರ್ಹ ರೈತರು 60,000 ರೂ. ದವರೆಗೆ ಇನ್ಪುಟ್ ಸಬ್ಸಿಡಿ ನೆರವನ್ನು ಪಡೆದುಕೊಳ್ಳಲು ಅವಕಾಶವಿದೆ. ಬರ ಪರಿಹಾರದ ವಿಚಾರದಲ್ಲಿ ವಿಪಕ್ಷಗಳು ಹಾಗೂ ಕೆಲವು ಹಿತಾಸಕ್ತಿಗಳು ಹರಡುತ್ತಿರುವ ತಪ್ಪು ಮಾಹಿತಿ ಮತ್ತು ವದಂತಿಗಳಿಗೆ ರೈತರು ಯಾವುದೇ ಕಾರಣಕ್ಕೂ ಕಿವಿಗೊಡಬಾರದು ಎಂದು ಡಿ.ಕೆ. ಶಿವಕುಮಾರ್ ಮನವಿ ಮಾಡಿದ್ದಾರೆ.