ಬಾಗ್ಪತ್, ನ.11 (DaijiworldNews/TA): ದೀಪಾವಳಿ ಹಬ್ಬದ ಸಂಭ್ರಮದಲ್ಲಿದ್ದ ಕುಟುಂಬವೊಂದರಲ್ಲಿ ಪಟಾಕಿ ಸಿಡಿಸುವ ವಿಚಾರಕ್ಕೆ ಆರಂಭವಾದ ಸಣ್ಣ ಗಲಾಟೆ ಗುಂಡಿನ ದಾಳಿಯಲ್ಲಿ ಅಂತ್ಯಗೊಂಡಿದೆ. ಉತ್ತರ ಪ್ರದೇಶದ ಬಾಗ್ಪತ್ ಜಿಲ್ಲೆಯ ಗೋಪಾಲಪುರ ಖಡಾನಾ ಗ್ರಾಮದಲ್ಲಿ ನಡೆದ ಈ ಘಟನೆಯಲ್ಲಿ ರಾಷ್ಟ್ರಪತಿ ಭವನದ ಅಂಗರಕ್ಷಕ ಪಡೆಯಾದ 'ಪ್ರೆಸಿಡೆಂಟ್ಸ್ ಬಾಡಿಗಾರ್ಡ್' ಘಟಕದಲ್ಲಿ ಕಾರ್ಯನಿರ್ವಹಿಸುತ್ತಿರುವ 26 ವರ್ಷದ ಸೌರಭ್ ತೋಮರ್ ಗಂಭೀರವಾಗಿ ಗಾಯಗೊಂಡಿದ್ದಾರೆ.

2021ರಲ್ಲಿ ರಾಷ್ಟ್ರಪತಿಯ ಅಂಗರಕ್ಷಕ ಪಡೆಯನ್ನು ಸೇರಿದ್ದ ಸೌರಭ್ ತೋಮರ್, ದೀಪಾವಳಿ ಹಬ್ಬವನ್ನು ಕುಟುಂಬದೊಂದಿಗೆ ಆಚರಿಸಲು ರಜೆ ಪಡೆದು ಸ್ವಗ್ರಾಮಕ್ಕೆ ಆಗಮಿಸಿದ್ದರು. ನವೆಂಬರ್ 8ರ ರಾತ್ರಿ ತಮ್ಮ ಸಹೋದರರಾದ ವಿನೀತ್ ಮತ್ತು ಮಿಂಟು ಅವರೊಂದಿಗೆ ಮನೆಯ ಮುಂದೆ ಪಟಾಕಿ ಸಿಡಿಸುತ್ತಿದ್ದರು. ಈ ಸಂದರ್ಭದಲ್ಲಿ ನೆರೆಮನೆಯವರಾದ ಧೀರಜ್ ಮತ್ತು ಮೋನು ಎಂಬುವವರು ಪಟಾಕಿ ಸಿಡಿಸುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಇದೇ ವಿಚಾರವಾಗಿ ಎರಡು ಕುಟುಂಬಗಳ ನಡುವೆ ಮಾತಿನ ಚಕಮಕಿ ಆರಂಭವಾಗಿ, ಬಳಿಕ ವಾಗ್ವಾದ ವಿಕೋಪಕ್ಕೆ ತಿರುಗಿದೆ.
ಕುಟುಂಬದವರು ನೀಡಿರುವ ದೂರಿನ ಪ್ರಕಾರ, ಗಲಾಟೆಯ ವೇಳೆ ಧೀರಜ್ ದೇಶೀಯವಾಗಿ ತಯಾರಿಸಿದ ಪಿಸ್ತೂಲ್ನಿಂದ ಗುಂಡು ಹಾರಿಸಿದ್ದಾನೆ. ಗುಂಡು ಮೊದಲು ಗೋಡೆಗೆ ಬಡಿದು ಬಳಿಕ ಸೌರಭ್ ಅವರ ತಲೆಯ ಹಿಂಭಾಗದಲ್ಲಿ, ಕಿವಿಯ ಸಮೀಪ ತಗುಲಿದೆ ಎಂದು ಆರೋಪಿಸಲಾಗಿದೆ. ಈ ವೇಳೆ ಸೌರಭ್ ಅವರ ಸಹೋದರ ವಿನೀತ್ ಕೂಡ ಗಾಯಗೊಂಡಿದ್ದಾರೆ. ಬಳಿಕ ಆರೋಪಿಗಳು ಕುಟುಂಬದವರಿಗೆ ಬೆದರಿಕೆ ಹಾಕಿ ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಗುಂಡೇಟಿನಿಂದ ಗಂಭೀರವಾಗಿ ಗಾಯಗೊಂಡ ಸೌರಭ್ ಅವರನ್ನು ಕುಟುಂಬದವರು ತಕ್ಷಣ ಆಸ್ಪತ್ರೆಗೆ ದಾಖಲಿಸಿದ್ದಾರೆ. ಹೆಚ್ಚಿನ ಚಿಕಿತ್ಸೆಗಾಗಿ ಮೀರತ್ನ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದ್ದು, ವೈದ್ಯರು ಶಸ್ತ್ರಚಿಕಿತ್ಸೆ ನಡೆಸಿ ಅವರ ತಲೆಯಲ್ಲಿದ್ದ ಗುಂಡನ್ನು ಹೊರತೆಗೆದಿದ್ದಾರೆ. ಸದ್ಯ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಸೌರಭ್ ಅವರ ತಂದೆ ಜನಕ್ರಾಜ್ ನೀಡಿದ ದೂರಿನ ಆಧಾರದ ಮೇಲೆ ಧೀರಜ್ ಮತ್ತು ಮೋನು ಅಲಿಯಾಸ್ ಪ್ರವೀಣ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆಗಾಗಿ ಮೂರು ಪೊಲೀಸ್ ತಂಡಗಳನ್ನು ರಚಿಸಲಾಗಿದೆ ಎಂದು ಬಾಗ್ಪತ್ ಪೊಲೀಸರು ತಿಳಿಸಿದ್ದಾರೆ. ಪಟಾಕಿ ಸಿಡಿಸುವ ವಿಚಾರಕ್ಕೆ ಆರಂಭವಾದ ಕ್ಷುಲ್ಲಕ ಗಲಾಟೆ ಗುಂಡಿನ ದಾಳಿಗೆ ತಿರುಗಿರುವುದು ಗ್ರಾಮದಲ್ಲಿ ಆತಂಕ ಮೂಡಿಸಿದೆ. ಪ್ರಕರಣದ ಕುರಿತು ಪೊಲೀಸರು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.