ಮಂಡ್ಯ, ನ.11 (DaijiworldNews/TA): ದೀಪಾವಳಿ ಎಂದರೆ ದೀಪಗಳ ಬೆಳಕು, ಪಟಾಕಿಗಳ ಸದ್ದು, ಸಿಹಿತಿಂಡಿಗಳ ಸಂಭ್ರಮ. ಆದರೆ ಸಕ್ಕರೆ ನಾಡು ಮಂಡ್ಯದ ಗ್ರಾಮವೊಂದರಲ್ಲಿ ಮಾತ್ರ ದೀಪಾವಳಿ ಹಬ್ಬದ ಸಂಭ್ರಮವೇ ವಿಭಿನ್ನ, ಇಲ್ಲಿ ಬಣ್ಣದ ನೀರಿನ ಓಕುಳಿಯ ಬದಲಿಗೆ ಸಗಣಿ ಎರಚಿಕೊಳ್ಳುವುದೇ ವಿಶೇಷ ಆಚರಣೆ.

ಹೌದು, ಮಂಡ್ಯ ಜಿಲ್ಲೆಯ ಕೆ.ಆರ್. ಪೇಟೆ ತಾಲೂಕಿನ ಸಾಸಲು ಗ್ರಾಮದಲ್ಲಿ ವಿಶಿಷ್ಟವಾದ ಸಗಣಿ ಓಕುಳಿ ಸಂಭ್ರಮದಿಂದ ನಡೆಯಿತು. ಮಂಗಳವಾರ ಸಂಜೆ ಗ್ರಾಮದ ಸೋಮೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಸಗಣಿ ಓಕುಳಿ ಆಚರಣೆಗೆ ಚಾಲನೆ ನೀಡಲಾಯಿತು. ಬಳಿಕ ಗ್ರಾಮಸ್ಥರು ಎರಡು ಗುಂಪುಗಳಾಗಿ ವಿಭಜನೆಯಾಗಿ ಪರಸ್ಪರ ಸಗಣಿ ಎರಚಿಕೊಳ್ಳುತ್ತಾ ಹಬ್ಬದ ಸಂಭ್ರಮದಲ್ಲಿ ಭಾಗಿಯಾದರು. ಸಗಣಿ ಉಂಡೆಗಳನ್ನು ಪರಸ್ಪರ ಎಸೆದುಕೊಳ್ಳುತ್ತಾ ಗ್ರಾಮಸ್ಥರು ವಿಶಿಷ್ಟ ಸಂಪ್ರದಾಯವನ್ನು ಮುಂದುವರಿಸಿದರು.
ಸಗಣಿ ಓಕುಳಿಯ ಬಳಿಕ ಮತ್ತೊಂದು ವಿಶೇಷ ಆಚರಣೆ ನಡೆಯಿತು. ಬಾಲಕನಿಗೆ ಶಿವನ ವೇಷ ಧರಿಸಿ ಕತ್ತೆಯ ಮೇಲೆ ಕೂರಿಸಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು. ಈ ವಿಶಿಷ್ಟ ಮೆರವಣಿಗೆ ಗ್ರಾಮಸ್ಥರು ಹಾಗೂ ನೋಡುಗರ ಗಮನ ಸೆಳೆಯಿತು. ಹೀಗೆ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಸಾಸಲು ಗ್ರಾಮದಲ್ಲಿ ನಡೆಯುವ ಸಗಣಿ ಓಕುಳಿ ಆಚರಣೆ ಸಂಭ್ರಮಕ್ಕೆ ವಿಭಿನ್ನ ಮೆರುಗು ನೀಡಿತು. ಆಧುನಿಕ ಆಚರಣೆಗಳ ನಡುವೆಯೂ ಗ್ರಾಮೀಣ ಸಂಪ್ರದಾಯವನ್ನು ಉಳಿಸಿಕೊಂಡು ಬಂದಿರುವ ಗ್ರಾಮಸ್ಥರು ಈ ಬಾರಿಯೂ ಉತ್ಸಾಹದಿಂದ ಹಬ್ಬದಲ್ಲಿ ಪಾಲ್ಗೊಂಡರು.