ಲಖನೌ, ನ.11 (DaijiworldNews/AA): ಒಂದು ದಿನ ಪಟಾಕಿ ಸಿಡಿಸುವುದರಿಂದ ಮಾಲಿನ್ಯ ಹೆಚ್ಚಾದರೇನಂತೆ? ಅದು ತಾನಾಗಿಯೇ ಕಡಿಮೆಯಾಗುತ್ತದೆ ಎಂದು ದೀಪಾವಳಿ ಹಬ್ಬದ ಸಂದರ್ಭದಲ್ಲಿ ಪಟಾಕಿ ಸಿಡಿಸುವುದನ್ನು ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಸಮರ್ಥನೆ ಮಾಡಿಕೊಂಡಿದ್ದಾರೆ.

ಲಖನೌದಲ್ಲಿ ನಡೆದ ಸರ್ಕಾರಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, "ಜನರು ದೀಪಾವಳಿಯನ್ನು ಸಂಭ್ರಮದಿಂದ ಆಚರಿಸಿದ್ದಾರೆ ಮತ್ತು ಸರ್ಕಾರ ಹಬ್ಬದ ಆಚರಣೆಗೆ ಯಾವುದೇ ನಿರ್ಬಂಧ ವಿಧಿಸಿರಲಿಲ್ಲ. ದೀಪಾವಳಿಯಿಂದ ಮಾಲಿನ್ಯ ಹೆಚ್ಚಾಗಿದೆ ಎಂದು ಕೆಲವರು ಹೇಳುತ್ತಿದ್ದಾರೆ. ಹಾಗಾದರೆ ಹೆಚ್ಚಾದರೆ ಏನಂತೆ? ಅದು ಮತ್ತೆ ಕಡಿಮೆಯಾಗುತ್ತದೆ. ಇದಕ್ಕೆ ನೀವು ಯಾಕೆ ಚಿಂತಿಸುತ್ತಿದ್ದೀರಿ? ಜನರು ಒಂದು ದಿನ ಪಟಾಕಿ ಸಿಡಿಸಿದಾಗ ಮಾತ್ರ ಮಾಲಿನ್ಯದ ಬಗ್ಗೆ ಮಾತನಾಡುತ್ತಾರೆ" ಎಂದು ವಾಗ್ದಾಳಿ ನಡೆಸಿದ್ದಾರೆ.
"ತಮ್ಮ ಭ್ರಷ್ಟ ಕೃತ್ಯಗಳ ಮೂಲಕ ಇಡೀ ವ್ಯವಸ್ಥೆಯನ್ನೇ ಕಲುಷಿತಗೊಳಿಸಿದವರನ್ನು ಯಾರೂ ಪ್ರಶ್ನಿಸುವುದಿಲ್ಲ. ಆದರೆ, ಸಾರ್ವಜನಿಕರು ಒಂದು ದಿನ ಪಟಾಕಿ ಸಿಡಿಸಿ, ಸಿಡಿಮದ್ದುಗಳೊಂದಿಗೆ ಹಬ್ಬ ಆಚರಿಸಿದರೆ ತಕ್ಷಣ ಮಾಲಿನ್ಯದ ವಿಚಾರ ಮುನ್ನೆಲೆಗೆ ಬರುತ್ತದೆ" ಎಂದು ಕಿಡಿಕಾರಿದ್ದಾರೆ.
"2017ಕ್ಕೂ ಮೊದಲು ಯಾವುದೇ ಹಬ್ಬ ಹತ್ತಿರ ಬಂದರೂ, ಅದು ಹೋಳಿಯಾಗಿರಲಿ, ದೀಪಾವಳಿಯಾಗಿರಲಿ, ವಿಜಯದಶಮಿ, ಜನ್ಮಾಷ್ಟಮಿ, ಶಿವರಾತ್ರಿ, ಕ್ರಿಸ್ಮಸ್, ಈದ್, ಗುರುಪರ್ವ ಅಥವಾ ಮಕರ ಸಂಕ್ರಾಂತಿಯಾಗಿರಲಿ, ಗಲಭೆಗಳು ಆರಂಭವಾಗುತ್ತಿದ್ದವು. ಪ್ರತಿಯೊಬ್ಬರೂ ಅಭದ್ರತೆಯ ಭಾವನೆಯಲ್ಲಿದ್ದರು. ಕಳೆದ ಒಂಬತ್ತೂವರೆ ವರ್ಷಗಳಲ್ಲಿ ರಾಜ್ಯದಲ್ಲಿ ಯಾವುದೇ ಕರ್ಫ್ಯೂ ಅಥವಾ ಗಲಭೆ ನಡೆದಿಲ್ಲ" ಎಂದಿದ್ದಾರೆ.
"ಹಿಂದಿನ ಸರ್ಕಾರಗಳ ಅವಧಿಯಲ್ಲಿ ಕರ್ಫ್ಯೂ ಜಾರಿಯಾಗುತ್ತಿದ್ದ ಕಾರಣ ವ್ಯಾಪಾರಿಗಳಿಗೆ ತೊಂದರೆಯಾಗುತ್ತಿತ್ತು. ಮಾರುಕಟ್ಟೆಗಳು ಮುಚ್ಚಲ್ಪಟ್ಟು, ಅಂಗಡಿಗಳಲ್ಲಿದ್ದ ಸರಕುಗಳು ಹಾಳಾಗುತ್ತಿದ್ದವು. ಕಳೆದ ಒಂಬತ್ತೂವರೆ ವರ್ಷಗಳಲ್ಲಿ ಉತ್ತರ ಪ್ರದೇಶದಲ್ಲಿ ಕರ್ಫ್ಯೂ ಇಲ್ಲ, ಗಲಭೆಗಳೂ ಇಲ್ಲ. ಎಲ್ಲವೂ ಸುಗಮವಾಗಿ ನಡೆಯುತ್ತಿದೆ" ಎಂದು ತಿಳಿಸಿದ್ದಾರೆ.