ಚೆನ್ನೈ, ಜ.04 (Daijiworld News/PY) : ತಮಿಳುನಾಡು ವಿಧಾನಸಭೆಯ ಮಾಜಿ ಸ್ಪೀಕರ್, ಆಡಳಿತಾರೂಢ ಎಐಎಡಿಎಂಕೆ ಹಿರಿಯ ಮುಖಂಡ ಪಿಎಚ್ ಪಾಂಡಿಯನ್ (74ವರ್ಷ) ಶನಿವಾರ ಚೆನ್ನೈನಲ್ಲಿ ನಿಧನರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಹೃದಯಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಪಾಂಡಿಯನ್, ವೆಲ್ಲೂರಿನ ಕ್ರಿಶ್ಚಿಯನ್ ಮೆಡಿಕಲ್ ಕಾಲೇಜಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಶನಿವಾರ ನಿಧನರಾಗಿದ್ದಾರೆ ಎಂದು ಪಾಂಡಿಯನ್ ಆಪ್ತರೊಬ್ಬರು ತಿಳಿಸಿದ್ದಾರೆ ಎಂದು ವರದಿ ತಿಳಿಸಿದೆ.
ಎಐಎಡಿಎಂಕೆಯ ಸ್ಥಾಪಕ ಸದಸ್ಯರಲ್ಲಿ ಒಬ್ಬರಾಗಿದ್ದ ಪಾಂಡಿಯನ್, ಡಿಎಂಕೆ ತೊರೆದ ಬಳಿಕ ಎಂಜಿಆರ್ ಜತೆ ಎಐಎಡಿಎಂಕೆ ಸ್ಥಾಪಿಸುವಲ್ಲಿ ಮುಂಚೂಣಿಯಲ್ಲಿದ್ದರು. ಅಲ್ಲದೇ ಪಾಂಡಿಯನ್ ನಾಲ್ಕು ಬಾರಿ ಶಾಸಕರಾಗಿದ್ದರು. ಎಂಜಿಆರ್ ಕಾಲಾವಧಿಯಲ್ಲಿ (1985-89) ಸ್ಪೀಕರ್ ಆಗಿ ಕಾರ್ಯನಿರ್ವಹಿಸಿದ್ದರು. 1999ರಲ್ಲಿ ತಿರುನೆಲ್ವೇಲಿ ಲೋಕಸಭಾ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾಗಿದ್ದರು.
ಸ್ಪೀಕರ್ ಅಂದ್ರೆ ರಬ್ಬರ್ ಸ್ಟ್ಯಾಂಪ್ ಅಲ್ಲ. ಆಕಾಶದೆತ್ತರ ಅಧಿಕಾರ ಇದೆ ಎಂದು ಪಾಂಡಿಯನ್ ಹೇಳುತ್ತಿದ್ದರು. ಅಲ್ಲದೇ ತಮ್ಮ ಅಧಿಕಾರವನ್ನು ಚಲಾಯಿಸಿದ್ದರು ಕೂಡಾ. ತಮಿಳು ವಾರಪತ್ರಿಕೆ ವಿಕಟನ್ನಲ್ಲಿ ಎಂಜಿಆರ್ ಅವರನ್ನು ಟೀಕಿಸುವ ವ್ಯಂಗ್ಯಚಿತ್ರವನ್ನು ಪ್ರಕಟಿಸಲಾಗಿತ್ತು, ಈ ಹಿನ್ನೆಲೆ ಸ್ಪೀಕರ್ ಪಾಂಡಿಯನ್ ಅವರು ಪತ್ರಿಕಾ ಸಂಪಾದಕರಿಗೆ ನೋಟಿಸ್ ಜಾರಿ ಮಾಡಿದ್ದರು.