ದಾವಣಗೆರೆ, ನ.11 (DaijiworldNews/AA): ರಾಜ್ಯದಲ್ಲಿ ಬಿಪಿಎಲ್ ಪಡಿತರ ಚೀಟಿಗಳ ಇ-ಕೆವೈಸಿ ಪ್ರಕ್ರಿಯೆಗೆ ನೀಡಲಾಗಿದ್ದ ಗಡುವನ್ನು ಇದೇ 30ರವರೆಗೆ ವಿಸ್ತರಿಸಲಾಗಿದೆ. ಸಾರ್ವಜನಿಕರು ಯಾವುದೇ ಆತಂಕ ಅಥವಾ ಗೊಂದಲಕ್ಕೆ ಒಳಗಾಗದೆ ಕಡ್ಡಾಯವಾಗಿ ಇ-ಕೆವೈಸಿ ಮಾಡಿಸಿಕೊಳ್ಳಬೇಕು ಎಂದು ಸಚಿವ ರಿಜ್ವಾನ್ ಅರ್ಷದ್ ತಿಳಿಸಿದ್ದಾರೆ.

ದಾವಣಗೆರೆಯಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವುದೇ ಅರ್ಹ ಫಲಾನುಭವಿಯ ಬಿಪಿಎಲ್ ಕಾರ್ಡ್ ರದ್ದಾಗಬಾರದು ಎಂದು ಈಗಾಗಲೇ ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಲಾಗಿದೆ. ಪ್ರಸ್ತುತ ಕೇಂದ್ರ ಸರ್ಕಾರ ನೀಡಿರುವ ಪಟ್ಟಿಯ ಆಧಾರದ ಮೇಲೆ ಪರಿಶೀಲನೆ ಕಾರ್ಯ ಮುಂದುವರಿದಿದೆ ಎಂದು ಅವರು ಸ್ಪಷ್ಟಪಡಿಸಿದರು.
ಇದೇ ವೇಳೆ, ಬಡವರ ಪಾಲಿನ ಪಡಿತರ ಅಕ್ಕಿಯ ಕಾಳಸಂತೆ ಹಾಗೂ ಅಕ್ರಮ ಮಾರಾಟದ ವಿರುದ್ಧ ರಾಜ್ಯ ಸರ್ಕಾರ ಅತ್ಯಂತ ಕಠಿಣ ಕ್ರಮ ಕೈಗೊಳ್ಳಲಿದೆ ಎಂದು ಅವರು ಕೇಂದ್ರ ಹಾಗೂ ಸ್ಥಳೀಯ ಕಳ್ಳಸಾಗಣೆದಾರರಿಗೆ ಎಚ್ಚರಿಕೆ ನೀಡಿದ್ದಾರೆ.