ಬೆಂಗಳೂರು, ಜ.04 (Daijiworld News/PY) : ಕನ್ನಡದಲ್ಲಿಯೇ ತೀರ್ಪು ಪ್ರಕಟಿಸಿದರೆ ತೀರ್ಪಿನ ಸಾಧಕ ಬಾಧಕಗಳ ಬಗ್ಗೆ ಅರ್ಥಮಾಡಿಕೊಳ್ಳಲು ಸುಲಭವಾಗುತ್ತದೆ. ನ್ಯಾಯ ವ್ಯವಸ್ಥೆಯಲ್ಲೂ ಪಾರದರ್ಶಕತೆಯನ್ನು ತರುವ ಮೂಲಕ ಜನರಲ್ಲಿ ನ್ಯಾಯಾಂಗದ ಬಗೆಗೆ ವಿಶ್ವಾಸ ಮೂಡುತ್ತದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ಶನಿವಾರ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಆಯೋಜಿಸಿದ್ದ ನ್ಯಾಯಾಂಗದಲ್ಲಿ ಕನ್ನಡ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಅಧೀನ ನ್ಯಾಯಾಲಯಗಳಲ್ಲಿ ಕನ್ನಡದ ಅನುಷ್ಠಾನ ಎಷ್ಟು ಮುಖ್ಯವೋ ಹೈಕೋರ್ಟ್ನಲ್ಲಿಯೂ ಕನ್ನಡದ ಸಮಗ್ರ ಅನುಷ್ಠಾನ ಅಷ್ಟೇ ಮುಖ್ಯ. ಆಂಗ್ಲ ಭಾಷೆಯಲ್ಲಿ ತೀರ್ಪು ಹೊರಬಿದ್ದಾಗ ಜನಸಾಮಾನ್ಯರಿಗೆ ತಿಳಿದುಕೊಳ್ಳಲು ಕಷ್ಟವಾಗುತ್ತದೆ. ಆದ್ದರಿಂದ ಕನ್ನಡ ಭಾಷೆಯಲ್ಲಿ ತೀರ್ಪು ನೀಡಿದರೆ ಜನರು ಸುಲಭವಾಗಿ ಅರ್ಥಮಾಡಿಕೊಳ್ಳುತ್ತಾರೆ. ಹಾಗಾಗಿ ನ್ಯಾಯಾಧೀಶರು ಕನ್ನಡ ಕಲಿಯುವಂತಹ ವಾತಾವರಣ ನಿರ್ಮಾಣವಾಗಬೇಕು ಎಂದು ಹೇಳಿದರು.
ಆಡಳಿತದಲ್ಲಿ ಕನ್ನಡ ಭಾಷೆ ತರುವ ಉದ್ದೇಶದಿಂದ ಆಡಳಿತ ಸುಧಾರಣೆ, ರಚನಾತ್ಮಕ ಸ್ವರೂಪ ನೀಡುವ ದಿಕ್ಕಿನತ್ತ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಕಾರ್ಯೋನ್ಮುಖವಾಗಿದೆ. ಆಡಳಿತದಲ್ಲಿ ಕನ್ನಡ ಭಾಷೆಯನ್ನು ಸಮರ್ಪಕವಾಗಿ ಬಳಸಲು ಸರ್ಕಾರ ಅನೇಕ ಕ್ರಮಗಳನ್ನು ಕೈಗೊಂಡಿದೆ. ಕನ್ನಡ ಭಾಷೆಯ ಅಭ್ಯುದಯ ಸಾಧಿಸಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದರು.
ಹೈಕೋರ್ಟ್ನ ನ್ಯಾಯಮೂರ್ತಿ ಕೆ.ಎನ್.ಫಣೀಂದ್ರ ಅವರು ಮಾತನಾಡಿ, ಕನ್ನಡದಲ್ಲಿಯೇ ತೀರ್ಪು ನೀಡಲು ನಮಗೆ ಯಾವುದೇ ತೊಂದರೆ ಇಲ್ಲ. ಆದರೆ ಜಿಲ್ಲಾ, ಹೈಕೋರ್ಟ್ ಸೇರಿದಂತೆ ಎಲ್ಲ ನ್ಯಾಯಾಲಯಗಳಲ್ಲಿ ಶೀಘ್ರಲಿಪಿಕಾರರು ಹಾಗೂ ಬೆರಳಚ್ಚುಗಾರರ ಕೊರತೆ ಇದೆ. ಶೀಘ್ರಲಿಪಿ ತರಬೇತಿ ಕೇಂದ್ರಗಳು ಮುಚ್ಚಿರುವುದರಿಂದ ಹುದ್ದೆಗಳ ಭರ್ತಿಗೆ ನ್ಯಾಯಾಲಯ ಅಧಿಸೂಚನೆ ಹೊರಡಿಸಿದರೂ, ಅರ್ಜಿಗಳು ಬರುತ್ತಿಲ್ಲ. ಆದ್ದರಿಂದ ಸರ್ಕಾರವೇ ಶೀಘ್ರ ಲಿಪಿ ತರಬೇತಿ ಕೇಂದ್ರಗಳನ್ನು ಸ್ಥಾಪಿಸಲು ಮುಂದಾಗಬೇಕು ಎಂದು ಮನವಿ ಮಾಡಿದರು.
ಸಚಿವ ಜೆ.ಸಿ.ಮಾಧುಸ್ವಾಮಿ ಮಾತನಾಡಿ, ರಾಷ್ಟ್ರೀಕೃತ ಬ್ಯಾಂಕ್ಗಳಲ್ಲಿ ಕನ್ನಡಿಗರಿಗಿಂತ ಅನ್ಯ ರಾಜ್ಯದವರೇ ಉದ್ಯೋಗ ಗಿಟ್ಟಿಸಿಕೊಳ್ಳುತ್ತಿದ್ದು, ಗ್ರಾಮೀಣ ಭಾಗದ ರೈತರು ಮತ್ತು ಸಾರ್ವಜನಿಕರಿಗೆ ಕನ್ನಡದಲ್ಲಿ ವಿವರಿಸದೇ ಆಂಗ್ಲ ಭಾಷೆಯಲ್ಲಿ ತಿಳಿಸುತ್ತಿದ್ದು, ಹಲವಾರು ಕಾರ್ಯಗಳಿಗೆ ಬೇರೆಯವರನ್ನು ಅವಲಂಬಿಸಬೇಕಾಗಿದೆ. ಬ್ಯಾಂಕುಗಳಲ್ಲಿ ಸ್ಥಳೀಯರಿಗೆ ಆದ್ಯತೆ ಎಂಬ ನಿಯಮ ರೂಪಿಸುವುದು ಅಗತ್ಯ ಇದೆ ಎಂದು ಹೇಳಿದರು.
ಸಚಿವ ಸಿ.ಟಿ.ರವಿ ಮಾತನಾಡಿ, ಕನ್ನಡದಲ್ಲಿ ತೀರ್ಪು ನೀಡಿದ ನ್ಯಾಯಾಧೀಶರಿಗೆ ಇಂದು ಪ್ರಶಸ್ತಿ ನೀಡುತ್ತಿರುವುದು ಸಂತಸದ ವಿಚಾರ. ನಮ್ಮದೇ ನಾಡಿನಲ್ಲಿ ಮಾತೃಭಾಷೆಯಲ್ಲಿ ತೀರ್ಪು ನೀಡಿದವರಿಗೆ ಪ್ರಶಸ್ತಿ ನೀಡಬೇಕಾಗಿರುವುದು ದುರ್ದೈವದ ಸಂಗತಿ. ಮುಂದೊಂದು ದಿನ ಮನೆಯಲ್ಲಿ ಅಮ್ಮ ಎಂದು ಕರೆಯುವ ಮಕ್ಕಳನ್ನೂ ಸನ್ಮಾನಿಸಬೇಕಾದ ದಿನಗಳು ಬರಬಹುದು ಎಂದು ತಿಳಿಸಿದರು.
ಇದೇ ವೇಳೆ ಕನ್ನಡದಲ್ಲಿ ತೀರ್ಪು ನೀಡಿದ 72 ಮಂದಿ ನ್ಯಾಯಾಧೀಶರು, 10 ಮಂದಿ ಸರ್ಕಾರಿ ಅಭಿಯೋಜಕರು, 20 ಮಂದಿ ವಕೀಲರಿಗೆ “ನ್ಯಾಯಾಂಗದಲ್ಲಿ ಕನ್ನಡ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್.ನಾಗಾಭರಣ, ಪ್ರಾಧಿಕಾರದ ಕಾರ್ಯದರ್ಶಿ ಡಾ.ಕೆ. ಮುರಳಿಧರ ಸೇರಿದಂತೆ ಹಲವರು ಉಪಸ್ಥಿತರಿದ್ದರು.