ಮುಂಬೈ, ನ.12 (DaijiworldNews/AA): ಬಹುತೇಕ ಯುವಕರು ಉನ್ನತ ಶಿಕ್ಷಣ ಮತ್ತು ವೃತ್ತಿಜೀವನವನ್ನು ರೂಪಿಸಿಕೊಳ್ಳುವ ವಯಸ್ಸಿನಲ್ಲಿ, 19 ವರ್ಷದ ಭಾರತೀಯ ಉದ್ಯಮಿ ದ್ರವ್ಯ ಶಾ ಅವರು ಭಿನ್ನ ಹಾದಿ ತುಳಿದು, 3 ಮಿಲಿಯನ್ ಡಾಲರ್ (ಅಂದಾಜು 28 ಕೋಟಿ ರೂ.) ಫಂಡಿಂಗ್ ಪಡೆದು ಎಐ ಸ್ಟಾರ್ಟ್ಅಪ್ ಒಂದನ್ನು ಕಟ್ಟಿದ್ದಾರೆ.

ದ್ರವ್ಯ ಶಾ ಅವರು 'ಸೂಪರ್ಮೆಮೊರಿ' ಎಂಬ ತಂತ್ರಜ್ಞಾನ ಆಧಾರಿತ ಸ್ಟಾರ್ಟ್ಅಪ್ನ ಸಂಸ್ಥಾಪಕರು. ಎಐ ವ್ಯವಸ್ಥೆಯಲ್ಲಿ ಪ್ರಮುಖ ಸವಾಲಾಗಿರುವ-ಬಳಕೆದಾರರೊಂದಿಗಿನ ಹಲವು ಸಂವಾದಗಳ ಮಾಹಿತಿಯನ್ನು ನೆನಪಿನಲ್ಲಿಟ್ಟುಕೊಳ್ಳುವುದು ಮತ್ತು ಸಂದರ್ಭವನ್ನು ಗ್ರಹಿಸುವ ಸಾಮರ್ಥ್ಯದ ಕೊರತೆಯನ್ನು ನಿವಾರಿಸುವುದು ಈ ಸಂಸ್ಥೆಯ ಮುಖ್ಯ ಉದ್ದೇಶವಾಗಿದೆ.
ಮೂಲತಃ ಮುಂಬೈನವರಾದ ಶಾ ಅವರ ಉದ್ಯಮಶೀಲತೆಯ ಪಯಣ ಆರಂಭವಾಗಿದ್ದು ಐಐಟಿ ಇಂಜಿನಿಯರಿಂಗ್ ಶಿಕ್ಷಣ ಪಡೆಯಲು ಜೆಇಇ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದಾಗ. ಈ ಸಮಯದಲ್ಲಿ ಅವರು ತಾವೇ ಸ್ವತಃ ಸಣ್ಣ ತಂತ್ರಜ್ಞಾನ ಪರಿಕರಗಳು ಹಾಗೂ ಎಐ ಆಧಾರಿತ ಪ್ರಾಜೆಕ್ಟ್ಗಳನ್ನು ಅಭಿವೃದ್ಧಿಪಡಿಸಲು ಪ್ರಾರಂಭಿಸಿದರು.
ಅವರ ಆರಂಭಿಕ ಪ್ರಾಜೆಕ್ಟ್ಗಳಲ್ಲಿ ಒಂದಾದ ಟ್ವೀಟ್ಗಳನ್ನು ಆಕರ್ಷಕ ಸ್ಕ್ರೀನ್ಶಾಟ್ಗಳಾಗಿ ಪರಿವರ್ತಿಸುವ ತಂತ್ರಜ್ಞಾನ ಪರಿಕರವು ಅಪಾರ ಜನಪ್ರಿಯತೆ ಗಳಿಸಿತು. ನಂತರ ಅದನ್ನು ಪ್ರಸಿದ್ಧ ಸೋಷಿಯಲ್ ಮೀಡಿಯಾ ಪ್ಲಾಟ್ಫಾರ್ಮ್ 'ಹೈಪ್ಫ್ಯೂರಿ' ಸಂಸ್ಥೆಗೆ ಮಾರಾಟ ಮಾಡಲಾಯಿತು. ಈ ಆರಂಭಿಕ ಸಾಹಸಗಳಿಂದ ಬಂದ ಆದಾಯವು ಅವರು ತಂತ್ರಜ್ಞಾನ ಮತ್ತು ಉದ್ಯಮಶೀಲತೆಯ ಕನಸನ್ನು ಬೆನ್ನಟ್ಟಿ ಅಮೆರಿಕಕ್ಕೆ ತೆರಳಲು ನೆರವಾಯಿತು.
ನಂತರ ಶಾ ಅವರು ಅರಿಜೋನಾ ಸ್ಟೇಟ್ ಯೂನಿವರ್ಸಿಟಿಯಲ್ಲಿ (ಎಎಸ್ಯು) ಶಿಕ್ಷಣ ಮುಂದುವರಿಸುತ್ತಲೇ ತಂತ್ರಜ್ಞಾನ ಉತ್ಪನ್ನಗಳನ್ನು ರೂಪಿಸುವುದನ್ನು ಮುಂದುವರಿಸಿದರು. ತಮ್ಮ ಆರಂಭಿಕ ಪಯಣದಲ್ಲಿ ಅವರು ಹಲವಾರು ಓಪನ್ ಸೋರ್ಸ್ ಪ್ರಾಜೆಕ್ಟ್ಗಳಲ್ಲಿ ಕೆಲಸ ಮಾಡಿದ್ದು, ಅಂತಹ 15ಕ್ಕೂ ಹೆಚ್ಚು ಯೋಜನೆಗಳನ್ನು ಯಶಸ್ವಿಯಾಗಿ ರೂಪಿಸಿದ್ದರು.
ಯಾವುದೇ ಒಂದೇ ಕಲ್ಪನೆಗೆ ಸೀಮಿತವಾಗದೆ, ಶಾ ಅವರು ಸತತ 40 ವಾರಗಳ ಕಾಲ ವಾರಕ್ಕೊಂದರಂತೆ ಹೊಸ ತಂತ್ರಜ್ಞಾನ ಉತ್ಪನ್ನವನ್ನು ಅಭಿವೃದ್ಧಿಪಡಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡುವ ಸವಾಲನ್ನು ಕೈಗೆತ್ತಿಕೊಂಡರು. ಈ ಪ್ರಯೋಗವು ವಿಭಿನ್ನ ಆಲೋಚನೆಗಳನ್ನು ಪರೀಕ್ಷಿಸಲು, ಬಳಕೆದಾರರ ಅಗತ್ಯಗಳನ್ನು ಅರ್ಥಮಾಡಿಕೊಳ್ಳಲು ಮತ್ತು ವಾಣಿಜ್ಯಿಕವಾಗಿ ಯಶಸ್ವಿಯಾಗಬಲ್ಲ ಉತ್ಪನ್ನಗಳನ್ನು ಗುರುತಿಸಲು ನೆರವಾಯಿತು. ಈ ರೀತಿ ವಾರಕ್ಕೊಮ್ಮೆ ಕೈಗೆತ್ತಿಕೊಂಡ ಯೋಜನೆಗಳಲ್ಲಿ ಒಂದೇ ಮುಂದೆ 'ಸೂಪರ್ಮೆಮೊರಿ' ಸ್ಟಾರ್ಟ್ಅಪ್ ಆಗಿ ರೂಪುಗೊಂಡಿತು.
'ಸೂಪರ್ಮೆಮೊರಿ' ಸಂಸ್ಥೆಯು ತನ್ನ ಸೀಡ್ ಫಂಡಿಂಗ್ ಸುತ್ತಿನಲ್ಲಿ ಅಂದಾಜು ೩ ಮಿಲಿಯನ್ ಡಾಲರ್ (ಸುಮಾರು 28 ಕೋಟಿ ರೂ.) ನಿಧಿ ಸಂಗ್ರಹಿಸಿದೆ. ಈ ಹೂಡಿಕೆ ಸುತ್ತಿನ ನೇತೃತ್ವವನ್ನು ಸೂಸಾ ವೆಂಚರ್ಸ್, ಬ್ರೌಡರ್ ಕ್ಯಾಪಿಟಲ್ ಮತ್ತು SF1.vc ವಹಿಸಿದ್ದು, ಗೂಗಲ್, ಓಪನ್ ಎಐ, ಕ್ಲೌಡ್ಫ್ಲೇರ್ ಸೇರಿದಂತೆ ಹಲವು ಪ್ರಮುಖ ತಂತ್ರಜ್ಞಾನ ಸಂಸ್ಥೆಗಳ ಉನ್ನತ ಅಧಿಕಾರಿಗಳು ಹಾಗೂ ದಿಗ್ಗಜರು ಭಾಗವಹಿಸಿದ್ದಾರೆ.
ಗೂಗಲ್ ಎಐ ಮುಖ್ಯಸ್ಥ ಜೆಫ್ ಡೀನ್, ಕ್ಲೌಡ್ಫ್ಲೇರ್ ಸಿಟಿಒ ಡೇನ್ ಕೆನೆಕ್ಟ್, ಡಿಪ್ಮೈಂಡ್ ಪ್ರಾಡಕ್ಟ್ ಮ್ಯಾನೇಜರ್ ಲೋಗನ್ ಕಿಲ್ಪ್ಯಾಟ್ರಿಕ್ ಮತ್ತು ಸೆಂಟ್ರಿ ಸಂಸ್ಥಾಪಕ ಡೇವಿಡ್ ಕ್ರೇಮರ್ ಸೇರಿದಂತೆ ಹಲವು ಪ್ರಮುಖ ವೈಯಕ್ತಿಕ ಹೂಡಿಕೆದಾರರು ಈ ಪಟ್ಟಿಯಲ್ಲಿದ್ದಾರೆ. ಈ ಬಂಡವಾಳ ಹೂಡಿಕೆಯು ಸಂಸ್ಥೆಯ ಎಐ ಮೆಮೊರಿ ತಂತ್ರಜ್ಞಾನ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸಲು ಹಾಗೂ ತನ್ನ ಪ್ಲಾಟ್ಫಾರ್ಮ್ ಅನ್ನು ವಿಸ್ತರಿಸಲು ಮತ್ತಷ್ಟು ಬಲ ನೀಡಿದೆ.