ಶ್ರೀನಗರ, ನ.12 (DaijiworldNews/AA): ಜಮ್ಮು ಮತ್ತು ಕಾಶ್ಮೀರದ ಕಿಶ್ತ್ವಾರ್ ಜಿಲ್ಲೆಯಲ್ಲಿ ಒಂದು ದಿನದ ಹಿಂದೆ ನಾಪತ್ತೆಯಾಗಿದ್ದ ಇಬ್ಬರು ವಿಶೇಷ ಪೊಲೀಸ್ ಅಧಿಕಾರಿಗಳ ಮೃತದೇಹ ಗುರುವಾರ ಮುಂಜಾನೆ ಪತ್ತೆಯಾಗಿವೆ.

ಮೃತಪಟ್ಟವರನ್ನ ದಚ್ಚನ್ ಪ್ರದೇಶದ ಕಿಯಾರ್ ಗ್ರಾಮದ ನಿವಾಸಿಗಳಾದ ಬಾಬಿ ಚಂದ್ (57) ಮತ್ತು ರಾಶ್ಪಾಲ್ ಕುಮಾರ್ (45) ಎಂದು ಗುರುತಿಸಲಾಗಿದೆ.
ಮೃತರಿಬ್ಬರೂ ಕಿಶ್ತ್ವಾರ್ ಪೊಲೀಸರ 'ಸ್ಪೆಷಲ್ ಆಪರೇಷನ್ಸ್ ಗ್ರೂಪ್' (ಎಸ್ಒಜಿ) ಗೆ ಸೇರಿದವರಾಗಿದ್ದು, ಕಿಯಾರ್ ವಲಯದಲ್ಲಿ ನಿಯೋಜನೆಗೊಂಡಿದ್ದರು. ಇನ್ನು ಬುಲೆಟ್ಗಳು ತಗುಲಿದ್ದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿರುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಚಂದ್ ಮತ್ತು ಕುಮಾರ್ ಅವರಿಗೆ ಮಾರ್ವಾಹ್ನ ಧರ್ನಾ ವಲಯದಲ್ಲಿರುವ 17ನೇ ರಾಷ್ಟ್ರೀಯ ರೈಫಲ್ಸ್ನ ತಾತ್ಕಾಲಿಕ ಕಾರ್ಯಾಚರಣೆ ನೆಲೆಗೆ ಕರ್ತವ್ಯಕ್ಕಾಗಿ ನಿಯೋಜಿಸಲಾಗಿತ್ತು. ಬುಧವಾರ ಅವರು ಕಿಯಾರ್ನಲ್ಲಿರುವ ತಮ್ಮ ಶಿಬಿರದಿಂದ ಸೇನಾ ನೆಲೆಗೆ ಪ್ರಯಾಣಿಸುತ್ತಿದ್ದಾಗ ನಾಪತ್ತೆಯಾಗಿದ್ದರು, ಕರ್ತವ್ಯಕ್ಕೆ ಹಾಜರಾಗಿರಲಿಲ್ಲ. ಇಬ್ಬರು ಅಧಿಕಾರಿಗಳು ನಾಪತ್ತೆಯಾದ ಬೆನ್ನಲ್ಲೇ ಸೇನಾ ಪಡೆ ವಿಶೇಷ ಕಾರ್ಯಾಚರಣೆ ಕೈಗೊಂಡಿತ್ತು. ಭದ್ರತಾ ಪಡೆಗಳು ದಚ್ಚನ್ ಪರ್ವತ ಪ್ರದೇಶ ಹಾಗೂ ದಟ್ಟಾರಣ್ಯ ಪ್ರದೇಶಗಳಲ್ಲಿ ಹುಟುಕಾಡ ನಡೆಸಿದ್ದವು. ಬಳಿಕ ಇಬ್ಬರೂ ಶವವಾಗಿ ಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳ ತಿಳಿಸಿದ್ದಾರೆ.
ಆದರೆ ಅವರ ಬಳಿಯಿದ್ದ ಸೇವಾ ಶಸ್ತ್ರಾಸ್ತ್ರಗಳು ನಾಪತ್ತೆಯಾಗಿವೆ. ಇದು ಈ ಘಟನೆಯಲ್ಲಿ ಉಗ್ರರ ಕೈವಾಡವಿರಬಹುದು ಎಂದು ಶಂಕಿಸಲಾಗಿದೆ. ಜೊತೆಗೆ ಈ ಘಟನೆಯಲ್ಲಿ ಉಗ್ರರ ಕೈವಾಡವಿರುವ ಸಾಧ್ಯತೆಯ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.