ಜೋಧ್ಪುರ್, ಜ.04 (Daijiworld News/PY) : "ರಾಹುಲ್ ಬಾಬಾ ಅವರೇ, ಸಿಎಎ ಬಗ್ಗೆ ಓದಿರದಿದ್ದರೆ ನಾನು ಕಾಯ್ದೆಯನ್ನು ಇಟಾಲಿಯನ್ಗೆ ಭಾಷಾಂತರಿಸಿ ನಿಮಗೆ ಸಹಾಯ ಮಾಡುತ್ತೇನೆ" ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ರಾಜಸ್ಥಾನದಲ್ಲಿ ಸಿಎಎ ಕುರಿತು ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅಮಿತ್ ಶಾ, "ರಾಹುಲ್ ಬಾಬಾ ಅವರೇ ನೀವು ಸಿಎಎ ಬಗ್ಗೆ ಓದಿದ್ದರೆ ಎಲ್ಲಿ ಬೇಕಾದರೂ ಚರ್ಚೆಗೆ ಬನ್ನಿ, ಸಿಎಎ ಬಗ್ಗೆ ಓದಿರದಿದ್ದರೆ, ಕಾಯ್ದೆಯನ್ನು ನಾನು ಇಟಾಲಿಯನ್ಗೆ ಭಾಷಾಂತರಿಸಿ ನಿಮಗೆ ಸಹಾಯ ಮಾಡುತ್ತೇನೆ, ದಯವಿಟ್ಟು ಓದಿಕೊಳ್ಳಿ" ಎಂದು ಹೇಳಿದ್ದಾರೆ.
"ವಿಪಕ್ಷಗಳು ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಎಷ್ಟೇ ವಿರೋಧಿಸಿದರೂ ಪೌರತ್ವ ತಿದ್ದುಪಡಿ ಕಾಯ್ದೆಯ ಅನುಷ್ಠಾನ ವಿಚಾರದ ನಿರ್ಧಾರದಿಂದ ಹಿಂದೆಸರಿಯುವುದಿಲ್ಲ. ಸಿಎಎ ವಿಚಾರದಲ್ಲಿ ಕಾಂಗ್ರೆಸ್ ಮುಸ್ಲಿಮರ ಹಾದಿತಪ್ಪಿಸುತ್ತಿದೆ. ಕಾಂಗ್ರೆಸ್ ಹಾಗೂ ಇತರ ಪಕ್ಷಗಳು ಸಿಎಎ ಕುರಿತು ಸುಳ್ಳು ಸುದ್ದಿಯನ್ನು ಪ್ರಚಾರ ಮಾಡುತ್ತಿವೆ. ಈ ಕಾಯ್ದೆಯು ಯಾರ ಪೌರತ್ವವನ್ನು ಕಸಿದುಕೊಳ್ಳುವುದಿಲ್ಲ, ಬದಲಾಗಿ ಅವರಿಗೆ ಪೌರತ್ವವನ್ನು ನೀಡುತ್ತದೆ" ಎಂದು ತಿಳಿಸಿದ್ದಾರೆ.