ನವದೆಹಲಿ, ನ.12 (DaijiworldNews/AK): ಪ್ರಧಾನಿ ನರೇಂದ್ರ ಮೋದಿ ಅವರನ್ನು ಕಾಂಗ್ರೆಸ್ ನಾಯಕ ಹಾಗೂ ಸಾಗರೋತ್ತರ ಕಾಂಗ್ರೆಸ್ ಅಧ್ಯಕ್ಷ ಸ್ಯಾಮ್ ಪಿತ್ರೋಡಾ ಹೊಗಳಿದ್ದಾರೆ.

ಮೋದಿ ಒಬ್ಬ ಒಳ್ಳೆಯ ವಾಗ್ಮಿ, ಕಠಿಣ ಪರಿಶ್ರಮಿ ಹಾಗೂ ವೈಯಕ್ತಿಕವಾಗಿ ಆತ್ಮೀಯ ವ್ಯಕ್ತಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅವರೊಂದಿಗೆ ತಮಗೆ ಯಾವುದೇ ವೈಯಕ್ತಿಕ ದ್ವೇಷ ಅಥವಾ ಸಮಸ್ಯೆಗಳಿಲ್ಲ. ಆದರೆ ಅವರ ರಾಜಕೀಯ ಸಿದ್ಧಾಂತಗಳು ಮತ್ತು ದೇಶದ ಬಗ್ಗೆ ಇರುವ ದೃಷ್ಟಿಕೋನದಲ್ಲಿ ಭಿನ್ನಾಭಿಪ್ರಾಯಗಳಿವೆ ಎಂದು ಸ್ಪಷ್ಟಪಡಿಸಿದ್ದಾರೆ.
ಐಎಎನ್ಎಸ್ ಸುದ್ದಿ ಸಂಸ್ಥೆಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಸ್ಯಾಮ್ ಪಿತ್ರೋಡಾ, ಪ್ರಧಾನಿ ಮೋದಿ ಅವರನ್ನು ತಾವು ವ್ಯಕ್ತಿಯಾಗಿ ಗೌರವಿಸುವುದಾಗಿ ಹೇಳಿದ್ದಾರೆ. ಮೋದಿ ಗುಜರಾತ್ನವರು. ಅವರೊಂದಿಗೆ ತಮಗೆ ಸ್ನೇಹಪೂರ್ಣ ಸಂಬಂಧವಿದೆ. ತಮ್ಮ ಪತ್ನಿಯೊಂದಿಗೆ ಹಲವು ಬಾರಿ ಮೋದಿಯನ್ನು ಭೇಟಿಯಾಗಿದ್ದೇನೆ. ವೈಯಕ್ತಿಕವಾಗಿ ಅವರು ತುಂಬಾ ಆತ್ಮೀಯರು, ದಯಾಳು ಹಾಗೂ ಕಾಳಜಿ ವಹಿಸುವ ವ್ಯಕ್ತಿ ಎಂದು ಪಿತ್ರೋಡಾ ಹೇಳಿದ್ದಾರೆ.
ಪ್ರಧಾನಿ ಮೋದಿ ಅವರೊಂದಿಗೆ ಭಿನ್ನಾಭಿಪ್ರಾಯ ಹೊಂದಿದ್ದರೂ ಅವರೊಂದಿಗೆ ಕುಳಿತು ಊಟ ಮಾಡಬಹುದು, ನಗುತ್ತಾ ಮಾತನಾಡಬಹುದು ಎಂದು ಪಿತ್ರೋಡಾ ಹೇಳಿದ್ದಾರೆ. ಅವರ ವ್ಯಕ್ತಿತ್ವದ ಬಗ್ಗೆ ನನಗೆ ಯಾವುದೇ ವಿರೋಧವಿಲ್ಲ. ಆದರೆ ಅವರ ರಾಜಕೀಯ ಸಿದ್ಧಾಂತಗಳು ಮತ್ತು ಜಗತ್ತನ್ನು ನೋಡುವ ದೃಷ್ಟಿಕೋನದ ಬಗ್ಗೆ ನನ್ನದೇ ಆದ ಭಿನ್ನಾಭಿಪ್ರಾಯಗಳಿವೆ ಎಂದು ತಿಳಿಸಿದ್ದಾರೆ.