ಬೆಂಗಳೂರು, ನ.13 (DaijiworldNews/AK): ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ, ಒಮ್ಮೆ ಬಳಸಿದ ಅಡುಗೆ ಎಣ್ಣೆಯನ್ನು (Used Cooking Oil - UCO) ಪದೇ ಪದೇ ಕಾಯಿಸಿ ಆಹಾರ ತಯಾರಿಸುವುದಕ್ಕೆ ಶಾಶ್ವತ ಕಡಿವಾಣ ಹಾಕಲು ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯು ರಾಜ್ಯಾದ್ಯಂತ 'ಟ್ರೇಸಬಿಲಿಟಿ ಆ್ಯಪ್' (Traceability App) ಜಾರಿಗೆ ತರಲು ನಿರ್ಧರಿಸಿದೆ.

ಈ ಕುರಿತು ಮಾನ್ಯ ಆರೋಗ್ಯ ಸಚಿವರಾದ ಯು.ಟಿ. ಖಾದರ್ ಅವರು ಸುದ್ದಿಗೋಷ್ಠಿ ನಡೆಸಿ ಈ ಮಹತ್ವದ ನಿರ್ಧಾರವನ್ನು ಪ್ರಕಟಿಸಿದರು.
ಪದೇ- ಪದೇ ಕಾಯಿಸಿದ ಎಣ್ಣೆಯಲ್ಲಿ ತಯಾರಿಸಿದ ತಿಂಡಿ-ತಿನಿಸುಗಳು ಜನರ ಆರೋಗ್ಯದ ಮೇಲೆ ಗಂಭೀರ ದುಷ್ಪರಿಣಾಮ ಬೀರುತ್ತವೆ. ಈ ಹಿನ್ನೆಲೆಯಲ್ಲಿ, ಹೋಟೆಲ್, ರೆಸ್ಟೋರೆಂಟ್ ಹಾಗೂ ಬೇಕರಿ ಸೇರಿದಂತೆ ರಾಜ್ಯದ ಎಲ್ಲಾ ಆಹಾರ ಉದ್ದಿಮೆದಾರರು (FBOs) ತಾವು ಬಳಸಿದ ಅಡುಗೆ ಎಣ್ಣೆಯನ್ನು ಕಡ್ಡಾಯವಾಗಿ FSSAI ಮಾನ್ಯತೆ ಪಡೆದ RUCO (Repurpose Used Cooking Oil) ಏಜೆನ್ಸಿಗಳ ಮೂಲಕವೇ ವಿಲೇವಾರಿ ಮಾಡುವುದನ್ನು ಕಡ್ಡಾಯಗೊಳಿಸಲಾಗಿದೆ.
ಒಮ್ಮೆ ಬಳಸಿದ ಎಣ್ಣೆ ಸಣ್ಣ ಹೋಟೆಲ್ಗಳಿಗೆ ಮರುಮಾರಾಟ ಆಗದಂತೆ ತಡೆಯವ ಕಠಿಣ ಸಂಕಲ್ಪ:
ನೂತನ 'ಟ್ರೇಸಬಿಲಿಟಿ ಆ್ಯಪ್' ಮೂಲಕ ಎಣ್ಣೆಯ ಸಂಗ್ರಹ, ಸಾಗಣೆ ಹಾಗೂ ವಿಲೇವಾರಿಯ ಪ್ರತಿ ಹಂತದ ಮೇಲೂ ಕಟ್ಟುನಿಟ್ಟಿನ ನಿಗಾ ವಹಿಸಲಾಗುತ್ತದೆ ಎಂದು ಎಚ್ಚರಿಸಿದರು.
ಒಂದು ಹೋಟೆಲ್ ಎಷ್ಟು ಪ್ರಮಾಣದ ಎಣ್ಣೆಯನ್ನು ಖರೀದಿಸಿದೆ, ಅದರಲ್ಲಿ ಎಷ್ಟು ಬಳಕೆಯಾಗಿದೆ, ಉಳಿದ ಬಳಸಿದ ಎಣ್ಣೆಯನ್ನು ಯಾರಿಗೆ ಮರುಮಾರಾಟ ಮಾಡಲಾಗಿದೆ, ಅದನ್ನು ಖರೀದಿಸಿದವರು ಯಾರು ಮತ್ತು ಅವರು ಆ ಎಣ್ಣೆಯನ್ನು ಏನು ಮಾಡಿದರು ಎಂಬ ಸಂಪೂರ್ಣ ವಿವರವನ್ನು ಈ ಆ್ಯಪ್ ಮೂಲಕ ಟ್ರ್ಯಾಕ್ (Track) ಮಾಡಲಾಗುತ್ತದೆ. ಉದಾಹರಣೆಗೆ, ಒಂದು ಹೋಟೆಲ್ 300 ರಿಂದ 400 ಲೀಟರ್ ಎಣ್ಣೆ ಖರೀದಿಸಿದರೆ, ಕನಿಷ್ಠ 75 ರಿಂದ 100 ಲೀಟರ್ ಬಳಸಿದ ಎಣ್ಣೆ ವಾಪಸ್ ಸಂಗ್ರಹವಾಗಲೇಬೇಕು (ಅಂದರೆ ಪ್ರತಿ 100 ಲೀಟರ್ ಖರೀದಿಗೆ ಕನಿಷ್ಠ 15 ಲೀಟರ್ ಲೆಕ್ಕ ಸಿಗಬೇಕು).
ಒಟ್ಟಾರೆಯಾಗಿ, ಒಮ್ಮೆ ಬಳಸಿದ ಕರಿದ ಎಣ್ಣೆಯು ಯಾವುದೇ ಕಾರಣಕ್ಕೂ ಸಣ್ಣ ಮಟ್ಟದ ಆಹಾರ ಮಾರಾಟ ಕ್ಷೇತ್ರಕ್ಕೆ ಅಥವಾ ಸಣ್ಣ ಸಣ್ಣ ಹೋಟೆಲ್ಗಳಿಗೆ ಮರುಮಾರಾಟವಾಗಬಾರದು ಮತ್ತು ಅದನ್ನು ಸಂಪೂರ್ಣವಾಗಿ ತಡೆಯಲೇಬೇಕು ಎಂಬುದು ಇಲಾಖೆಯ ದೃಢ ಇಚ್ಛಾಶಕ್ತಿ ಹಾಗೂ ಕಠಿಣ ತೀರ್ಮಾನವಾಗಿದೆ.
ಜೈವಿಕ ಯೋಜನೆಗಳಿಗೆ ಬಳಕೆ ಹಾಗೂ ಪ್ರಾಯೋಗಿಕ ಕೇಂದ್ರಗಳು:
ಸಂಗ್ರಹಿಸಲಾದ ಬಳಸಿದ ಎಣ್ಣೆಯು ಯಾವುದೇ ಕಾರಣಕ್ಕೂ ಬೇರೆ ಹೋಟೆಲ್ಗಳಿಗೆ ಅಥವಾ ಚರಂಡಿ, ಹಳ್ಳಗಳಿಗೆ ಸೇರದಂತೆ ಎಚ್ಚರ ವಹಿಸಲಾಗುತ್ತಿದೆ. ಇದಕ್ಕಾಗಿ ಮೊದಲ ಹಂತದಲ್ಲಿ ಬೆಂಗಳೂರು, ಮಂಗಳೂರು, ಮೈಸೂರು ಹಾಗೂ ಹುಬ್ಬಳ್ಳಿಯಲ್ಲಿ ಪ್ರಾಯೋಗಿಕ ಕೇಂದ್ರಗಳನ್ನು ತೆರೆಯಲಾಗುತ್ತಿದ್ದು, ಸಂಗ್ರಹವಾದ ಎಣ್ಣೆಯನ್ನು ಈ ಕೇಂದ್ರಗಳಿಗೆ ಕಳುಹಿಸಿ ಬಯೋ-ಡೀಸೆಲ್ ಅಥವಾ ಸೋಪ್ ತಯಾರಿಕೆಯಂತಹ ಜೈವಿಕ ಯೋಜನೆಗಳಿಗೆ ಬಳಸಲಾಗುವುದು.
ಗುಣಮಟ್ಟ ಪರೀಕ್ಷೆ ಮತ್ತು ಮುಂದಿನ ಯೋಜನೆಗಳು ಸ್ಥಳದಲ್ಲೇ ಗುಣಮಟ್ಟ ಪರೀಕ್ಷೆ: ಕರಿದ ಎಣ್ಣೆಯ ಗುಣಮಟ್ಟವನ್ನು ಸ್ಥಳದಲ್ಲೇ ಪರಿಶೀಲಿಸಲು ಆಹಾರ ಸುರಕ್ಷತಾ ಅಧಿಕಾರಿಗಳಿಗೆ (FSOs) ಈಗಾಗಲೇ TPC (Total Polar Compounds) ಮೀಟರ್ಗಳನ್ನು ನೀಡಲಾಗಿದ್ದು, ಎಣ್ಣೆಯಲ್ಲಿ TPC ಪ್ರಮಾಣ 25 ಮೀರಿದರೆ ಅದು ಅಡುಗೆಗೆ ಯೋಗ್ಯವಲ್ಲ ಎಂದು ಪರಿಗಣಿಸಿ ಕ್ರಮ ಕೈಗೊಳ್ಳಲಾಗುತ್ತದೆ
2022ರಿಂದ ಇಲ್ಲಿಯವರೆಗೆ ರಾಜ್ಯದ ಆಹಾರ ಉದ್ದಿಮೆದಾರರಿಂದ ಒಟ್ಟು 91,02,794 ಲೀಟರ್ (91 ಲಕ್ಷಕ್ಕೂ ಹೆಚ್ಚು ಲೀಟರ್) ಬಳಸಿದ ಎಣ್ಣೆಯನ್ನು ಸಂಗ್ರಹಿಸಲಾಗಿದ್ದು, ಈ ಆ್ಯಪ್ನಿಂದ ವ್ಯವಸ್ಥೆ ಮತ್ತಷ್ಟು ಬಿಗಿಯಾಗಲಿದೆ.
* ಮನೆ-ಮನೆಗಳಿಂದಲೂ ಎಣ್ಣೆ ಸಂಗ್ರಹಣೆ: ಎರಡನೇ ಹಂತದಲ್ಲಿ ಕುಟುಂಬಗಳ ಅಡುಗೆಮನೆಗಳಲ್ಲಿ ಬಳಸುವ ಎಣ್ಣೆಯ ನಿರ್ವಹಣೆಯ ಬಗ್ಗೆಯೂ ಕ್ರಮ ಕೈಗೊಳ್ಳಲಾಗುವುದು. ಹಸಿ ಕಸ ಮತ್ತು ಒಣ ಕಸ ಸಂಗ್ರಹಿಸುವ ಮಾದರಿಯಲ್ಲೇ ಮನೆಮನೆಗಳಿಂದ ಬಳಸಿದ ಅಡುಗೆ ಎಣ್ಣೆಯನ್ನು ಸಂಗ್ರಹಿಸಿ ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡುವ ಯೋಜನೆ ರೂಪಿಸಲಾಗುತ್ತಿದೆ.
ರಾಷ್ಟ್ರಮಟ್ಟದ ಸಭೆ: ಈ ಕುರಿತು ವಿಸ್ತೃತವಾಗಿ ಚರ್ಚಿಸಲು ನವೆಂಬರ್ 25 ರಂದು ಬೆಂಗಳೂರಿನಲ್ಲಿ ರಾಷ್ಟ್ರಮಟ್ಟದ ಸಭೆ ಹಾಗೂ ನವೆಂಬರ್ 26 ರಂದು ರಾಷ್ಟ್ರದ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯ ಉನ್ನತ ಅಧಿಕಾರಿಗಳನ್ನು ಒಳಗೊಂಡ ರಾಷ್ಟ್ರಮಟ್ಟದ ಸಮ್ಮೇಳನ (Conference) ಆಯೋಜಿಸಲು ತೀರ್ಮಾನಿಸಲಾಗಿದೆ.
ಸಾರ್ವಜನಿಕರಿಗೆ ಮನವಿ:
ಈ ಯೋಜನೆಯ ಯಶಸ್ಸಿಗೆ ಸಾರ್ವಜನಿಕರ ಸಹಭಾಗಿತ್ವ ಅತ್ಯಗತ್ಯ. ರಾಜ್ಯದ ಯಾವುದೇ ಭಾಗದಲ್ಲಿ ಬಳಸಿದ ಅಡುಗೆ ಎಣ್ಣೆಯನ್ನು ಮತ್ತೆ ಅಡುಗೆಗೆ ಬಳಸುತ್ತಿರುವುದು ಕಂಡುಬಂದರೆ, ನಾಗರಿಕರು ತಕ್ಷಣವೇ ಆಹಾರ ಸುರಕ್ಷತಾ ಇಲಾಖೆಯ QR ಕೋಡ್ ಸ್ಕ್ಯಾನ್ ಮಾಡಿ ದೂರು ನೀಡಬಹುದು. ಶುದ್ಧ ಮತ್ತು ಸುರಕ್ಷಿತ ಆಹಾರವನ್ನು ಖಚಿತಪಡಿಸಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂಬುದನ್ನು ಆರೋಗ್ಯ ಸಚಿವರು ತಿಳಿಸಿದರು.