ದಿಂಡೋರಿ, ನ.13 (DaijiworldNews/TA): ಸಿಹಿತಿಂಡಿ ಎಂದು ಭಾವಿಸಿ ವ್ಯಕ್ತಿಯೊಬ್ಬರು ಸ್ಫೋಟಕವನ್ನು ಬಾಯಿಗೆ ಹಾಕಿಕೊಂಡ ಪರಿಣಾಮ ಅದು ಸ್ಫೋಟಗೊಂಡು ಸ್ಥಳದಲ್ಲೇ ಮೃತಪಟ್ಟಿರುವ ಆಘಾತಕಾರಿ ಘಟನೆ ಮಧ್ಯಪ್ರದೇಶದ ದಿಂಡೋರಿ ಜಿಲ್ಲೆಯಲ್ಲಿ ನಡೆದಿದೆ. ನವೆಂಬರ್ 10ರ ತಡರಾತ್ರಿ ಜಿಲ್ಲೆಯ ಪದಾರಿಯಾ ಗ್ರಾಮದಲ್ಲಿ ಈ ಘಟನೆ ಸಂಭವಿಸಿದೆ. ಮೃತರನ್ನು ರಾಜೇಂದ್ರ ಬರೋಟಿಯಾ ಎಂದು ಗುರುತಿಸಲಾಗಿದೆ.

ಮಾಹಿತಿಯ ಪ್ರಕಾರ, ರಾಜೇಂದ್ರ ಅವರು ಮನೆಯಲ್ಲಿದ್ದಾಗ ರಾಮ್ ಭಗತ್ ಬರೋಟಿಯಾ ಎಂಬಾತ ಅಲ್ಲಿಗೆ ಬಂದಿದ್ದಾನೆ. ಈ ವೇಳೆ ಆತನ ಕೈಯಲ್ಲಿದ್ದ ಬಿಳಿ ಬಣ್ಣದ ದುಂಡನೆಯ ವಸ್ತುವೊಂದನ್ನು ರಾಜೇಂದ್ರ ಅವರಿಗೆ ನೀಡಿ, ಅದು ರಸಗುಲ್ಲಾ ಎಂದು ಹೇಳಿದ್ದಾನೆ ಎನ್ನಲಾಗಿದೆ. ಇದನ್ನು ಸಿಹಿತಿಂಡಿ ಎಂದು ನಂಬಿದ ರಾಜೇಂದ್ರ ಬಾಯಿಗೆ ಹಾಕಿಕೊಂಡು ಕಚ್ಚಿದ್ದಾರೆ. ಆದರೆ ಅದು ರಸಗುಲ್ಲಾ ಆಗಿರದೆ, ದೇಶೀಯವಾಗಿ ತಯಾರಿಸಿದ ಸ್ಫೋಟಕವಾಗಿತ್ತು. ಅವರು ಕಚ್ಚಿದ ಕೆಲವೇ ಕ್ಷಣಗಳಲ್ಲಿ ಸ್ಫೋಟ ಸಂಭವಿಸಿದ್ದು, ತೀವ್ರ ಗಾಯಗಳಿಂದ ರಾಜೇಂದ್ರ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಸ್ಫೋಟದ ಸದ್ದು ಕೇಳಿ ರಾಜೇಂದ್ರ ಅವರ ಪತ್ನಿ ಸುಶೀಲಾ ಬಾಯಿ ಕೋಣೆಯಿಂದ ಹೊರಬಂದು ನೋಡಿದಾಗ ಪತಿ ರಕ್ತಸಿಕ್ತ ಸ್ಥಿತಿಯಲ್ಲಿ ಬಿದ್ದಿರುವುದು ಕಂಡುಬಂದಿದೆ. ತಕ್ಷಣ ನೆರೆಹೊರೆಯವರ ಸಹಾಯದಿಂದ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲು ಪ್ರಯತ್ನಿಸಿದ್ದಾರೆ. ಆದರೆ ಅಷ್ಟರಲ್ಲಾಗಲೇ ಅವರು ಮೃತಪಟ್ಟಿದ್ದರು ಎನ್ನಲಾಗಿದೆ.
ಘಟನೆಯ ಮಾಹಿತಿ ತಿಳಿದ ಪೊಲೀಸರು ಸ್ಥಳಕ್ಕೆ ಧಾವಿಸಿ ತನಿಖೆ ಆರಂಭಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ರಾಮ್ ಭಗತ್ ಬರೋಟಿಯಾ ಸೇರಿದಂತೆ ಇಬ್ಬರನ್ನು ಬಂಧಿಸಲಾಗಿದೆ. ವಿಚಾರಣೆ ವೇಳೆ ರಾಮ್ ಭಗತ್, ತನಗೆ ಒಬ್ಬ ಹುಡುಗ ಬಾಂಬ್ ನೀಡಿದ್ದ ಎಂದು ಹೇಳಿದ್ದಾನೆ. ಈ ಹಿನ್ನೆಲೆಯಲ್ಲಿ ಆ ಹುಡುಗನನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಈ ರೀತಿಯ ಸ್ಫೋಟಕಗಳನ್ನು ಪ್ರಾಣಿಗಳನ್ನು ಕೊಲ್ಲಲು ಬಳಸಲಾಗುತ್ತಿತ್ತು ಎನ್ನಲಾಗಿದೆ. ಆದರೆ ರಾಜೇಂದ್ರ ಅವರಿಗೆ ಸ್ಫೋಟಕವನ್ನು ನೀಡಿದ್ದರ ಹಿಂದಿನ ಉದ್ದೇಶವೇನು? ಇದು ಆಕಸ್ಮಿಕ ಘಟನೆಯೇ ಅಥವಾ ಉದ್ದೇಶಪೂರ್ವಕ ಕೃತ್ಯವೇ ಎಂಬುದರ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ರಸಗುಲ್ಲಾ ಎಂದು ಭಾವಿಸಿ ಸ್ಫೋಟಕವನ್ನು ಬಾಯಿಗೆ ಹಾಕಿಕೊಂಡ ವ್ಯಕ್ತಿಯ ದುರಂತ ಸಾವು ಇದೀಗ ಗ್ರಾಮದಲ್ಲಿ ಆತಂಕ ಮೂಡಿಸಿದೆ.