ನವದೆಹಲಿ, ಜ 05 (Daijiworld News/MB) : ಪಾಕಿಸ್ತಾನದ ನಂಕಾನಾ ಸಾಹಿಬ್ ಗುರುದ್ವಾರದ ಮೇಲೆ ನಡೆದ ದಾಳಿ ಅನಗತ್ಯ ಮತ್ತು ಅಪ್ರಚೋದಿತ" ದಾಳಿ ಎಂದು ಹೇಳಿದ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಈ ದಾಳಿಯನ್ನು ತೀವ್ರವಾಗಿ ಖಂಡಿಸಿದ್ದಾರೆ.
"ಯಾತ್ರಾರ್ಥಿಗಳಿಗೆ ಭದ್ರತೆ ಮತ್ತು ಮುಂದೆ ನಡೆಯಬಹುದಾದ ದಾಳಿಯನ್ನು ತಡೆಗಟ್ಟಲು ಪಾಕಿಸ್ತಾನ ಸರ್ಕಾರ ದೇವಾಲಯಕ್ಕೆ ಬಿಗಿ ಭದ್ರತೆಯನ್ನು ಒದಗಿಸಬೇಕು. ಕೇಂದ್ರ ಸರ್ಕಾರ ಈ ಕೂಡಲೇ ಪಾಕಿಸ್ತಾನದ ಅಧಿಕಾರಿಗಳನ್ನುಸಂಪರ್ಕಿಸಿ ಈ ಭದ್ರತೆಯನ್ನು ಖಚಿತಮಾಡಿಕೊಳ್ಳಬೇಕು" ಎಂದು ಒತ್ತಾಯ ಮಾಡಿದ್ದಾರೆ.
ಹಾಗೆಯೇ ಈ ದಾಳಿಕೋರರ ವಿರುದ್ಧ ತಕ್ಷಣ ಕೇಸ್ ದಾಖಲು ಮಾಡಿ, ಅವರನ್ನು ಬಂಧನ ಮಾಡುವಂತೆ ಭಾರತ ಸರ್ಕಾರ ಇಮ್ರಾನ್ ಖಾನ್ ಸರ್ಕಾರದ ಮೇಲೆ ಒತ್ತಡ ಹಾಕಬೇಕು ಎಂದು ಸೋನಿಯಾ ಗಾಂಧಿ ತಿಳಿಸಿದ್ದಾರೆ.
ಶುಕ್ರವಾರ ಸಿಖ್ ಧರ್ಮ ಸಂಸ್ಥಾಪಕ ಗುರುನಾನಕ್ ದೇವ್ ಜನ್ಮಸ್ಥಳ ಎಂದೇ ಖ್ಯಾತಿ ಹೊಂದಿರುವ ನಂಕಾನ ಸಾಹಿಬ್ ಗುರುದ್ವಾರದ ಮೇಲೆ ದಾಳಿ ನಡೆದಿದ್ದು ಕಲ್ಲು ತೂರಾಟ ಕೂಡಾ ನಡೆದಿದೆ.