ನವದೆಹಲಿ, ನ.13 (DaijiworldNews/TA): ಛತ್ ಪೂಜೆ ಸಮೀಪಿಸುತ್ತಿರುವ ಬೆನ್ನಲ್ಲೇ ದೆಹಲಿಯ ಯಮುನಾ ನದಿಯಲ್ಲಿ ನೂರಾರು ಮೀನುಗಳು ಸತ್ತು ತೇಲುತ್ತಿರುವ ಘಟನೆ ಆತಂಕಕ್ಕೆ ಕಾರಣವಾಗಿದೆ. ಸೋನಿಯಾ ವಿಹಾರ್ ಪ್ರದೇಶದ ಬಳಿ ಮೀನುಗಳು ಮೃತಪಟ್ಟಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನದಿಯ ನೀರಿನ ಗುಣಮಟ್ಟದ ಬಗ್ಗೆ ಮತ್ತೆ ಪ್ರಶ್ನೆಗಳು ಎದ್ದಿವೆ. ಇದರ ಬೆನ್ನಲ್ಲೇ ಆಡಳಿತಾರೂಢ ಬಿಜೆಪಿ ಮತ್ತು ವಿರೋಧ ಪಕ್ಷ ಆಮ್ ಆದ್ಮಿ ಪಕ್ಷದ ನಡುವೆ ಆರೋಪ-ಪ್ರತ್ಯಾರೋಪಗಳ ಸಮರ ಶುರುವಾಗಿದೆ.

ದೆಹಲಿಯ ಸೋನಿಯಾ ವಿಹಾರ್ ಪ್ರದೇಶದ ಯಮುನಾ ನದಿಯಲ್ಲಿ ನೂರಾರು ಮೀನುಗಳು ಸತ್ತು ತೇಲುತ್ತಿರುವುದು ಕಂಡುಬಂದಿದೆ. 'ನಮೋ ಯಮುನಾ ರಿವರ್ ಸಫಾರಿ' ಎಂಬ ಮನರಂಜನಾ ದೋಣಿ ಸೇವೆ ಆರಂಭವಾದ ಮರುದಿನವೇ ಈ ಘಟನೆ ಬೆಳಕಿಗೆ ಬಂದಿರುವುದು ಚರ್ಚೆಗೆ ಕಾರಣವಾಗಿದೆ. ಕಳೆದ ಒಂದು ತಿಂಗಳ ಅವಧಿಯಲ್ಲಿ ಯಮುನಾ ನದಿಯಲ್ಲಿ ಮೀನುಗಳು ಸಾಯುತ್ತಿರುವುದು ಇದು ಎರಡನೇ ಘಟನೆಯಾಗಿದೆ. ಇದಕ್ಕೂ ಮೊದಲು ಅಕ್ಟೋಬರ್ 14ರಂದು ಬುರಾರಿ ಪ್ರದೇಶದ ನದಿ ದಡದಲ್ಲಿಯೂ ನೂರಾರು ಮೀನುಗಳು ಸತ್ತು ಬಿದ್ದಿದ್ದವು.
ಘಟನೆಗೆ ಸಂಬಂಧಿಸಿದಂತೆ ದೆಹಲಿ ಸಚಿವ ಪರ್ವೇಶ್ ವರ್ಮಾ ಪ್ರತಿಕ್ರಿಯಿಸಿದ್ದು, ಸರ್ಕಾರದ ವರ್ಚಸ್ಸಿಗೆ ಧಕ್ಕೆ ತರುವ ಉದ್ದೇಶದಿಂದ ಕೆಲವರು ಉದ್ದೇಶಪೂರ್ವಕವಾಗಿ ಸತ್ತ ಮೀನುಗಳನ್ನು ನದಿಗೆ ಎಸೆದಿರುವ ಸಾಧ್ಯತೆಯಿದೆ ಎಂದು ಆರೋಪಿಸಿದ್ದಾರೆ. ಈ ಕುರಿತು ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದ್ದು, ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುವುದು. ಸತ್ತ ಮೀನುಗಳನ್ನು ನದಿಗೆ ಎಸೆದವರು ಯಾರು? ಅವರಿಗೆ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರೊಂದಿಗೆ ಸಂಪರ್ಕವಿದೆಯೇ ಎಂಬ ಬಗ್ಗೆಯೂ ತನಿಖೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ. ಬಿಜೆಪಿ ಸಚಿವರ ಆರೋಪಕ್ಕೆ ಆಮ್ ಆದ್ಮಿ ಪಕ್ಷ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಮಾಜಿ ಸಚಿವ ಹಾಗೂ ಎಎಪಿ ನಾಯಕ ಸೌರಭ್ ಭಾರದ್ವಾಜ್ ಅವರು ಮೀನುಗಳು ಸತ್ತು ತೇಲುತ್ತಿರುವ ವಿಡಿಯೋ ಹಂಚಿಕೊಂಡು ದೆಹಲಿ ಸರ್ಕಾರವನ್ನು ಪ್ರಶ್ನಿಸಿದ್ದಾರೆ. "ಮೀನುಗಳಿಗೇ ಈ ನೀರು ಸುರಕ್ಷಿತವಿಲ್ಲದಿದ್ದರೆ, ಮನುಷ್ಯರಿಗೆ ಹೇಗೆ ಸುರಕ್ಷಿತವಾಗಿರುತ್ತದೆ?" ಎಂದು ಅವರು ಪ್ರಶ್ನಿಸಿದ್ದಾರೆ. ಛತ್ ಪೂಜೆಗೂ ಮುನ್ನ ಯಮುನಾ ನದಿಯನ್ನು ಸ್ವಚ್ಛವಾಗಿ ತೋರಿಸುವ ಉದ್ದೇಶದಿಂದ ಹಾನಿಕಾರಕ ರಾಸಾಯನಿಕಗಳನ್ನು ಬಳಸಲಾಗುತ್ತಿದೆಯೇ ಎಂಬ ಅನುಮಾನವನ್ನೂ ವ್ಯಕ್ತಪಡಿಸಿದ್ದಾರೆ. ಸತ್ತ ಮೀನುಗಳನ್ನು ಯಾರೋ ತಂದು ನದಿಗೆ ಎಸೆದಿದ್ದಾರೆ ಎಂಬ ಸಚಿವರ ಆರೋಪಕ್ಕೆ ಸಾಕ್ಷ್ಯ ಒದಗಿಸುವಂತೆ ಎಎಪಿ ಒತ್ತಾಯಿಸಿದೆ. ಮೀನುಗಳ ಸಾವಿಗೆ ನಿಜವಾದ ಕಾರಣ ತಿಳಿಯಲು ವೈಜ್ಞಾನಿಕ ತನಿಖೆ ನಡೆಸಬೇಕು ಎಂದು ಆಗ್ರಹಿಸಿದೆ.
ಯಮುನಾ ನದಿಯಲ್ಲಿ ಮೀನುಗಳು ಸಾಯಲು ನಿಖರ ಕಾರಣ ಇನ್ನೂ ಪತ್ತೆಯಾಗಿಲ್ಲ. ಆದರೆ ಪರಿಸರ ತಜ್ಞರು ಕೆಲವು ಸಂಭಾವ್ಯ ಕಾರಣಗಳನ್ನು ಗುರುತಿಸಿದ್ದಾರೆ. ಕೈಗಾರಿಕೆಗಳಿಂದ ಸಂಸ್ಕರಿಸದ ತ್ಯಾಜ್ಯ ನೀರು ನದಿಗೆ ಸೇರುವುದು, ನೀರಿನಲ್ಲಿ ಕರಗಿರುವ ಆಮ್ಲಜನಕದ ಪ್ರಮಾಣ ಕಡಿಮೆಯಾಗುವುದು, ಅಮೋನಿಯಾ ಸೇರಿದಂತೆ ಹಾನಿಕಾರಕ ರಾಸಾಯನಿಕಗಳ ಪ್ರಮಾಣ ಹೆಚ್ಚಾಗುವುದು, ಒಳಚರಂಡಿ ನೀರು ನದಿಗೆ ಸೇರುವುದರಿಂದ ನೀರಿನ ಗುಣಮಟ್ಟ ಕುಸಿಯುವುದು, ಇವು ಮೀನುಗಳ ಸಾವಿಗೆ ಕಾರಣವಾಗಿರಬಹುದಾದ ಸಾಧ್ಯತೆಗಳಾಗಿದ್ದು, ನಿಖರ ಕಾರಣ ತಿಳಿಯಲು ನೀರು, ಮಣ್ಣು ಮತ್ತು ಸತ್ತ ಮೀನುಗಳ ಮಾದರಿಗಳನ್ನು ಪ್ರಯೋಗಾಲಯದಲ್ಲಿ ಪರೀಕ್ಷಿಸುವ ಅಗತ್ಯವಿದೆ. ಇದಕ್ಕೂ ಮೊದಲು ಅಕ್ಟೋಬರ್ 14ರಂದು ದೆಹಲಿಯ ಬುರಾರಿ ಪ್ರದೇಶದಲ್ಲಿ ಯಮುನಾ ನದಿ ದಡದಲ್ಲಿ ನೂರಾರು ಮೀನುಗಳು ಸತ್ತು ಬಿದ್ದಿದ್ದವು. ಆಗಲೂ ಕೈಗಾರಿಕಾ ತ್ಯಾಜ್ಯ ಮತ್ತು ನೀರಿನಲ್ಲಿ ಆಮ್ಲಜನಕದ ಕೊರತೆ ಮೀನುಗಳ ಸಾವಿಗೆ ಕಾರಣವಾಗಿರಬಹುದು ಎಂಬ ಅನುಮಾನ ವ್ಯಕ್ತವಾಗಿತ್ತು. ಆದರೆ ನಿಖರ ಕಾರಣ ದೃಢಪಟ್ಟಿರಲಿಲ್ಲ. ಇದೀಗ ಸೋನಿಯಾ ವಿಹಾರ್ ಪ್ರದೇಶದಲ್ಲೂ ಇಂತಹದ್ದೇ ಘಟನೆ ಮರುಕಳಿಸಿರುವುದು ನದಿಯ ನೀರಿನ ಗುಣಮಟ್ಟದ ಬಗ್ಗೆ ಆತಂಕ ಹೆಚ್ಚಿಸಿದೆ.
ಛತ್ ಪೂಜೆಗೂ ಯಮುನಾ ನದಿಗೂ ಏನು ಸಂಬಂಧ? : ಛತ್ ಪೂಜೆಯ ಸಂದರ್ಭದಲ್ಲಿ ಭಕ್ತರು ನದಿ ಹಾಗೂ ಕೆರೆಗಳ ನೀರಿನಲ್ಲಿ ನಿಂತು ಸೂರ್ಯನಿಗೆ ಅರ್ಘ್ಯ ಅರ್ಪಿಸುವುದು ಸಂಪ್ರದಾಯ. ದೆಹಲಿಯ ಯಮುನಾ ನದಿ ತೀರದಲ್ಲಿಯೂ ಸಾವಿರಾರು ಭಕ್ತರು ಪೂಜೆ ಸಲ್ಲಿಸುತ್ತಾರೆ. ಈ ಬಾರಿ ನವೆಂಬರ್ 15 ಮತ್ತು 16ರಂದು ಛತ್ ಪೂಜೆ ನಡೆಯಲಿರುವ ಹಿನ್ನೆಲೆಯಲ್ಲಿ ಯಮುನಾ ನದಿಯ ಸ್ವಚ್ಛತೆ ಹಾಗೂ ಭಕ್ತರ ಸುರಕ್ಷತೆ ಬಗ್ಗೆ ಪ್ರಶ್ನೆಗಳು ಎದ್ದಿವೆ. ಒಂದೆಡೆ ನದಿಯಲ್ಲಿ ಮೀನುಗಳ ಸರಣಿ ಸಾವು, ಮತ್ತೊಂದೆಡೆ ಹೊಸದಾಗಿ ಆರಂಭವಾಗಿರುವ 'ನಮೋ ಯಮುನಾ ರಿವರ್ ಸಫಾರಿ' ದೋಣಿ ಸೇವೆ. ಈ ಬೆಳವಣಿಗೆಗಳ ನಡುವೆ ಯಮುನಾ ನದಿಯ ನೀರಿನ ಗುಣಮಟ್ಟದ ಕುರಿತು ವೈಜ್ಞಾನಿಕ ವರದಿ ಯಾವಾಗ ಹೊರಬರಲಿದೆ ಎಂಬ ಕುತೂಹಲ ಮೂಡಿದೆ.