ಬೆಂಗಳೂರು, ಜ 05 (Daijiworld News/MB) : ಪೌರತ್ವ ತಿದ್ದುಪಡಿ ಕಾಯ್ದೆಯ ಕುರಿತು ಜನರಲ್ಲಿ ಅರಿವು ಮೂಡಿಸುವ ನಿಟ್ಟಿನಲ್ಲಿ ಬಿಜೆಪಿ ಹಮ್ಮಿಕೊಂಡಿರುವ ಮನೆ ಮನೆ ಸಂಪರ್ಕ ಅಭಿಯಾನಕ್ಕೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಭಾನುವಾರ ಬೆಂಗಳೂರಿನ ಶಿವಾಜಿನಗರ ವಿಧಾನಸಭಾ ಕ್ಷೇತ್ರದ ವಸಂತ ನಗರದಲ್ಲಿ ಚಾಲನೆ ನೀಡಲಿದ್ದಾರೆ.
ಪೌರತ್ವ ತಿದ್ದುಪಡಿಯ ಕುರಿತು ಜನರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ದೇಶಾದ್ಯಂತ ಮೂರು ಮೂರು ಕೋಟಿ ಮನೆಗಳಿಗೆ ತೆರಳಿ ಜನರಿಗೆ ಮಾಹಿತಿ ನೀಡುವ ಕಾರ್ಯಕ್ರಮವನ್ನು ಆರಂಭ ಮಾಡಿದ್ದು ಕರ್ನಾಟಕದಲ್ಲಿ 30 ಲಕ್ಷ ಮನೆಗಳಿಗೆ ತೆರಳುವ ಗುರಿ ಹೊಂದಿದ್ದೇವೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪಿ ಮುರಳೀಧರ್ ರಾವ್ ತಿಳಿಸಿದರು.
ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಸಿದ್ದರಾಮಯ್ಯನವರು ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಆಫ್ಘಾನಿಸ್ತಾನದ ಮುಸಲ್ಮಾನರಿಗೆ ಪೌರತ್ವ ಯಾಕೆ ನೀಡಬೇಕು ಎಂಬುದಕ್ಕೆ ಕಾರಣ ನೀಡಲಿ, ಭಾರತ ವಿಭಜನೆಯಾಗಿರುವುದೇ ಈ ಧರ್ಮದ ಆಧಾರದಲ್ಲಿ, ಪಾಕಿಸ್ತಾನ ಮತ್ತು ಬಾಂಗ್ಲಾದೇಶಗಳಲ್ಲಿ ನಲೆಯೂರಲು ಕೋಟ್ಯಂತರ ಜನ ಮುಸಲ್ಮಾನರು ನಿರ್ಧಾರ ಮಾಡಿದ್ದರು. ಈಗ ಮೂರು ಇಸ್ಲಾಮಿಕ್ ಗಣರಾಜ್ಯ ದೇಶಗಳಲ್ಲಿ ಇರುವ ಮುಸಲ್ಮಾನರಿಗೆ ಭಾರತದ ಪೌರತ್ವ ನೀಡುವುದು ಎಂದರೆ ಅದು ಸರಿಯಲ್ಲ. ಅಂತವರಿಗೆ ನಾವು ಪೌರತ್ವ ನೀಡುವುದಿಲ್ಲ, ಅದೇನಾಗುತ್ತದೆಯೋ ನೋಡೋಣ ಎಂದು ಹೇಳಿದ್ದಾರೆ.