ಬೆಂಗಳೂರು, ನ.12 (DaijiworldNews/AK): ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿಯವರ 12 ವರ್ಷಗಳ ಪರಿಶ್ರಮದ ಫಲವಾಗಿ ನಮ್ಮ ದೇಶವು ಜಗತ್ತಿನ ನಾಲ್ಕನೇ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ರಾಜ್ಯ ಉಸ್ತುವಾರಿ ಹರೀಶ್ ದ್ವಿವೇದಿ ಅವರು ತಿಳಿಸಿದ್ದಾರೆ.

ಅವರು ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದರು. ದೇಶವು ಹಿಂದೆ ವಿಶ್ವದಲ್ಲಿ 11-12ನೇ ಸ್ಥಾನದಲ್ಲಿತ್ತು. ಮೋದಿಜೀ ಅವರ ಪ್ರಯತ್ನದಿಂದ ಭಾರತವು ನಾಲ್ಕನೇ ಪ್ರಮುಖ ಆರ್ಥಿಕ ಶಕ್ತಿಯಾಗಿದೆ ಎಂದು ವಿಶ್ಲೇಷಿಸಿದರು.
2047ಕ್ಕೆ ಭಾರತವನ್ನು ವಿಕಸಿತ ಭಾರತವನ್ನಾಗಿ ಮಾಡಲು ಮೋದಿಜೀ ಅವರು ಸಂಕಲ್ಪ ಮಾಡಿದ್ದಾರೆ. ವಿಕಸಿತ ಭಾರತ ಮಾಡಲು ವಿಕಸಿತ ಕರ್ನಾಟಕ ಆಗಬೇಕಿದೆ. ಇದಕ್ಕಾಗಿ ಇಂದು ಅನೇಕ ಯೋಜನೆಗಳಿಗೆ ಚಾಲನೆ ನೀಡುತ್ತಿದ್ದಾರೆ. ಕರ್ನಾಟಕದ ಅಭಿವೃದ್ಧಿಗಾಗಿ ಕೇಂದ್ರವು ಮುಂದಿನ ದಿನಗಳಲ್ಲಿ ಇನ್ನಷ್ಟು ಯೋಜನೆಗಳನ್ನು ನೀಡಲಿದೆ ಎಂದು ತಿಳಿಸಿದರು.