ಶ್ರೀನಗರ/ಲೇಹ್, ನ.13 (DaijiworldNews/AA): ಲಡಾಖ್ನಲ್ಲಿರುವ ನನ್ನ ನಿವಾಸದ ಹೊರಗೆ ಪೊಲೀಸ್ ಮತ್ತು ಅರೆಸೇನಾ ಪಡೆಯ 25ಕ್ಕೂ ಹೆಚ್ಚು ಸಿಬ್ಬಂದಿಯನ್ನು ನಿಯೋಜಿಸುವ ಮೂಲಕ ನನ್ನನ್ನು ಗೃಹಬಂಧನದಲ್ಲಿ ಇರಿಸಲಾಗಿದೆ ಎಂದು ಪರಿಸರ ಹೋರಾಟಗಾರ ಸೊನಮ್ ವಾಂಗ್ಚೂಕ್ ಹೊಸ ಬಾಂಬ್ ಸಿಡಿಸಿದ್ದಾರೆ.

"ಒಬ್ಬ ವ್ಯಕ್ತಿಯನ್ನು ಔಪಚಾರಿಕವಾಗಿ ಬಂಧಿಸದೆ ಶಾಂತಿಯುತ ಪ್ರತಿಭಟನೆಯಲ್ಲಿ ಭಾಗವಹಿಸುವುದರಿಂದ ಹೇಗೆ ತಡೆಯಬಹುದು. ಬುಧವಾರ ರಾತ್ರಿಯಿಂದಲೇ ನಮ್ಮ ನಿವಾಸದ ಹೊರಗೆ ಹಲವು ವಾಹನಗಳು ಮತ್ತು ಟೆಂಟ್ಗಳೊಂದಿಗೆ ಅನೇಕ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಇದು ನಮ್ಮ ಓಡಾಟಕ್ಕೆ ನಿರ್ಬಂಧ ಹೇರಿದಂತಾಗಿದೆ" ಎಂದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ ಆರೋಪಿಸಿದ್ದಾರೆ.
"ಲಡಾಖ್ನ ವಿವಿಧ ಬೇಡಿಕೆಗಳಿಗಾಗಿ ಮತ್ತು ಡಿಸೆಂಬರ್ 4ರಂದು ಹಮ್ಮಿಕೊಂಡಿರುವ ಸ್ವಾಯತ್ತ ಹಿಲ್ ಡೆವಲಪ್ಮೆಂಟ್ ಕೌನ್ಸಿಲ್ ಚುನಾವಣೆಯ ವೇಳಾಪಟ್ಟಿ ವಿಚಾರವಾಗಿ ಲೆಹ್ ಅಪೆಕ್ಸ್ ಮಂಡಳಿ (ಎಲ್ಎಬಿ) ಹಾಗೂ ಕಾರ್ಗಿಲ್ ಡೆಮಾಕ್ರಟಿಕ್ ಅಲಯನ್ಸ್ನ ನಾಯಕರು ಹಾಗೂ ಕಾರ್ಯಕರ್ತರೊಂದಿಗೆ ಪ್ರತಿಭಟಿಸಲು ಸಿದ್ಧತೆ ನಡೆಸಿದ್ದೆವು. ಇದೇ ಕಾರಣಕ್ಕೆ ನನ್ನ ಮೇಲೆ ನಿರ್ಬಂಧ ಹೇರಲಾಗಿದೆ" ಎಂದು ತಿಳಿಸಿದ್ದಾರೆ.
"ಚಳಿಗಾಲದಲ್ಲಿ ಚುನಾವಣೆ ನಡೆಸುವುದು ಸರಿಯಲ್ಲ. ಆ ವೇಳೆ ಲಡಾಖ್ನ ಹೆಚ್ಚಿನ ಜನರು ಕೆಲಸ ಹಾಗೂ ಚಳಿಯ ಕಾರಣದಿಂದ ಆ ಪ್ರದೇಶದಿಂದ ಹೊರಗೆ ಹೋಗಿರುತ್ತಾರೆ. ಜೊತೆಗೆ, ಇಲ್ಲಿನ ಸ್ಥಳೀಯ ಆಡಳಿತ ಮಂಡಳಿಗಳಾದ 'ಹಿಲ್ ಕೌನ್ಸಿಲ್ಗಳನ್ನು ನಿಷ್ಕ್ರಿಯಗೊಳಿಸಲಾಗಿದೆ. ಅವುಗಳ ಪ್ರಮುಖ ಅಧಿಕಾರಗಳನ್ನು ಕಿತ್ತುಕೊಳ್ಳಲಾಗಿದೆ" ಎಂದು ಆರೋಪ ಮಾಡಿದ್ದಾರೆ.