ಬೆಂಗಳೂರು, ಜ 05 (Daijiworld News/MB) : ರೈತರಿಗೆ ಪರಿಹಾರ ಧನವನ್ನು ನೀಡಲು ಅವರಿಂದ ಲಂಚ ಕೇಳುವ ಅಧಿಕಾರಿಗಳಿಗೆ ಮಧ್ಯಮ ಕೈಗಾರಿಕಾ ಖಾತೆ ಸಚಿವ ಜಗದೀಶ್ ಶೆಟ್ಟರ್ ಎಚ್ಚರಿಕೆ ನೀಡಿದ್ದಾರೆ.
ಶನಿವಾರ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ, ಹರಲಾಳಿನ ರಕ್ಷಣಾ ಮತ್ತು ಅಂತರಿಕ್ಷ ಕೈಗಾರಿಕಾ ಲೇ ಔಟ್ ಪ್ರದೇಶಗಳಿಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ ಅವರು ಹರಲಾಳು, ಮುದ್ದೇನಹಳ್ಳಿ ಮತ್ತು ಸುತ್ತಮುತ್ತಲಿನ ಭಾಗಗಳ ರೈತರ ಜೊತೆ ಮಾತುಕತೆ ನಡೆಸಿದರು.
ರೈತರ ಜಮೀನನ್ನು ಕೈಗಾರಿಕಾಭಿವೃದ್ಧಿಗೆಂದು ಸರ್ಕಾರ ಪಡೆದ ನಂತರ ಅವರಿಗೆ ಪರಿಹಾರ ನೀಡುವುದು ಸರ್ಕಾರದ ಕರ್ತವ್ಯ. ಕೈಗಾರಿಕಾಭಿವೃದ್ಧಿಗಾಗಿ ರಾಜ್ಯ ಸರ್ಕಾರ ಹಲವು ವಲಯಗಳಲ್ಲಿ ರೈತರಿಂದ 1,800 ಎಕರೆ ಜಮೀನನ್ನು ಪಡೆದುಕೊಂಡಿದ್ದು ಇಂತಹ ಸಂದರ್ಭದಲ್ಲಿ ರೈತರಿಗೆ ಎದುರಾಗಿರುವ ಸಮಸ್ಯೆ ಯಾವುದು ಎಂದು ತಿಳಿದು ಅದನ್ನು ಶೀಘ್ರವೇ ಬಗೆಹರಿಸಬೇಕು ಎಂದು ಜಗದೀಶ್ ಶೆಟ್ಟರ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.