ನವದೆಹಲಿ, ನ.14 (DaijiworldNews/AA): ಬಂಗಾಳಕೊಲ್ಲಿಯ ಆಗ್ನೇಯ ಭಾಗದಲ್ಲಿ ಉಂಟಾಗಿದ್ದ ವಾಯುಭಾರ ಕುಸಿತ ಮತ್ತಷ್ಟು ತೀವ್ರಗೊಂಡು ಸುಸ್ಪಷ್ಟ ವಾಯುಭಾರ ಕುಸಿತವಾಗಿ ಮಾರ್ಪಟ್ಟಿದೆ. ಹೀಗಾಗಿ ಮುಂದಿನ 24 ಗಂಟೆಗಳಲ್ಲಿ ಚಂಡಮಾರುತವಾಗಿ ತೀವ್ರಗೊಳ್ಳುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಶನಿವಾರ ಎಚ್ಚರಿಕೆ ನೀಡಿದೆ.

ನಂತರ ಈ ವ್ಯವಸ್ಥೆಯು ವಾಯವ್ಯ ದಿಕ್ಕಿನತ್ತ ಚಲಿಸಲಿದೆ. ನಾಡಿದ್ದು ಸೋಮವಾರ ಸಂಜೆ ವೇಳೆಗೆ ಮಧ್ಯ ಬಂಗಾಳಕೊಲ್ಲಿಯಲ್ಲಿ ಮತ್ತಷ್ಟು ತೀವ್ರಗೊಂಡು ಚಂಡಮಾರುತವಾಗಿ ರೂಪುಗೊಳ್ಳುವ ನಿರೀಕ್ಷೆಯಿದೆ. ಶನಿವಾರ ಬೆಳಗ್ಗೆ 5:30ರ ವೇಳೆಗೆ ಸುಸ್ಪಷ್ಟ ವಾಯುಭಾರ ಕುಸಿತವು ಬಂಗಾಳಕೊಲ್ಲಿಯ ಆಗ್ನೇಯ ಭಾಗದಲ್ಲಿ ನೆಲೆಗೊಂಡಿತ್ತು ಎಂದು ಇಲಾಖೆ ಪ್ರಕಟಣೆ ಹೊರಡಿಸಿದೆ.
ಇದರ ಪ್ರಭಾವದಿಂದ ಅಂಡಮಾನ್ ಸಮುದ್ರ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ಹಾಗೂ ಬಂಗಾಳಕೊಲ್ಲಿಯ ಬಹುತೇಕ ಭಾಗಗಳಲ್ಲಿ ಬಿರುಗಾಳಿ ಸಹಿತ ಹವಾಮಾನ ಕಂಡುಬರುವ ಸಾಧ್ಯತೆಯಿದೆ. ಈ ವೇಳೆ ಗಾಳಿಯ ವೇಗ ಗಂಟೆಗೆ 60 ಕಿ.ಮೀ. ತಲುಪಬಹುದು ಎಂದು ಐಎಂಡಿ ತಿಳಿಸಿದೆ.
ನವೆಂಬರ್ 17ರಿಂದ ಗಾಳಿಯ ವೇಗ ಗಂಟೆಗೆ 80 ಕಿ.ಮೀ.ಗೆ ಏರಿಕೆಯಾಗುವ ಸಾಧ್ಯತೆಯಿದೆ. ನಂತರದ ಎರಡು ದಿನಗಳ ಕಾಲ ಇದೇ ವೇಗ ಮುಂದುವರಿಯಲಿದೆ. ಸಮುದ್ರದಲ್ಲಿ ಪ್ರಕ್ಷುಬ್ಧ ವಾತಾವರಣ ಉಂಟಾಗುವ ಸಾಧ್ಯತೆಯಿದೆ. ಈ ಹಿನ್ನೆಲೆ ಸಮುದ್ರದಲ್ಲಿರುವ ಮೀನುಗಾರರು ನಾಳೆಯೊಳಗೆ ದಡಕ್ಕೆ ಮರಳಬೇಕು. ಜೊತೆಗೆ ಈ ಅವಧಿಯಲ್ಲಿ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಐಎಂಡಿ ಸೂಚನೆ ನೀಡಿದೆ.