ನವದೆಹಲಿ, ಜ 05 (Daijiworld News/MB) : "ಇಮ್ರಾನ್ ಖಾನ್ ಅವರು ಭಾರತದ ಮುಸ್ಲಿಮರ ಬಗ್ಗೆ ಚಿಂತೆ ಮಾಡುವುದಕ್ಕಿಂತ ಪಾಕಿಸ್ತಾನದ ಸ್ಥಿತಿಗತಿಗಳ ಬಗ್ಗೆ ಹೆಚ್ಚು ಆಲೋಚಿಸಬೇಕಾಗಿದೆ" ಎಂದು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ವಾಗ್ದಾಳಿ ನಡೆಸಿದ್ದಾರೆ.
ಭಾರತ ದೇಶದ್ದು ಎಂದು ನಕಲಿ ವಿಡಿಯೋ ಹಾಕಿದ ಪಾಕ್ ಪ್ರಧಾನಿ ಇಮ್ರಾನ್ ಖಾನ್ ವಿರುದ್ಧ ಸಿಡಿಮಿಡಿಗೊಂಡ ಅಸಾದುದ್ದೀನ್ ಓವೈಸಿ, "ಜಿನ್ನಾರ ತಪ್ಪು ಸಿದ್ದಾಂತವನ್ನು ಭಾರತೀಯರಾದ ನಾವು ತಿರಸ್ಕಾರ ಮಾಡಿದ್ದೇವೆ. ನಾವು ಹೆಮ್ಮೆಯ ಭಾರತೀಯ ಮುಸ್ಲಿಮರು, ನಾವು ಬದಲಾಗುವುದಿಲ್ಲ ಎಂದು ಹೇಳಿದ್ದಾರೆ.
ಈ ಸಂದರ್ಭದಲ್ಲಿ ಪ್ರಧಾನಿ ಮೋದಿ ವಿರುದ್ಧವು ಆಕ್ರೋಶ ವ್ಯಕ್ತಪಡಿಸಿದ ಅವರು, "ಎನ್ಆರ್ಸಿಯನ್ನು ಜಾರಿಗೆ ತರಲು ನಾವು ಬಿಡುವುದಿಲ್ಲ. ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಲು ಕಾಂಗ್ರೆಸ್, ಎಐಎಂಐಎಂ ಸೇರಿದಂತೆ ಇತರ ಪಕ್ಷಗಳು ಜೊತೆಯಾಗಬೇಕು" ಎಂದು ತಿಳಿಸಿದ್ದಾರೆ.
ಇಮ್ರಾನ್ ಖಾನ್, ಪೊಲೀಸರು ವ್ಯಕ್ತಿಯೊಬ್ಬನಿಗೆ ಥಳಿಸುತ್ತಿರುವ ವಿಡಿಯೋ ಒಂದನ್ನು ಅಪ್ಲೋಡ್ ಮಾಡಿ "ಮುಸ್ಲಿಮರ ಮೇಲೆ ಭಾರತದ ಪೊಲೀಸರು ದೌರ್ಜನ್ಯ ನೋಡಿ" ಎಂದು ಟ್ವೀಟ್ ಮಾಡಿದ್ದರು. ಆದರೆ ಇಮ್ರಾನ್ ಖಾನ್ ಟ್ವೀಟ್ ಮಾಡಿದ್ದ ವಿಡಿಯೋ 2013ರ ಮೇ ತಿಂಗಳಿನಲ್ಲಿ ಬಾಂಗ್ಲಾದೇಶದ ರ್ಯಾಪಿಡ್ ಆ್ಯಕ್ಷನ್ ಬೆಟಾಲಿಯನ್ ನಡೆಸಿದ್ದ ಕಾರ್ಯಾಚರಣೆಯಾಗಿತ್ತು. ಈ ಹಿನ್ನಲೆ ವ್ಯಾಪಕವಾಗಿ ಆಕ್ರೋಶ ವ್ಯಕ್ತವಾಗಿತ್ತು ಹಾಗೂ ಹಲವರು ಪಾಕ್ ಪ್ರಧಾನಿಯನ್ನು ವ್ಯಂಗ್ಯ ಮಾಡಿದ್ದರು.