ಹಾಸನ, ನ.14 (DaijiworldNews/AA): ದಯಮಾಡಿ ಮಹಿಳೆಯರು 2,000 ರೂ.ಗೆ ಮರುಳಾಗಬೇಡಿ. ನಾನು ತಿಂಗಳಿಗೆ 5,000 ರೂ. ಬರುವಂತೆ ಮಾಡಬಲ್ಲೆ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದರು.

ಹಾಸನದಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾತನಾಡಿದ ಅವರು, "ದಯಮಾಡಿ ಮಹಿಳೆಯರು 2,000ಕ್ಕೆ ಮರಳಾಗಬೇಡಿ. ನಾನು ತಿಂಗಳಿಗೆ 5,000 ಬರುವಂತೆ ಮಾಡಬಲ್ಲೆ. ಇವತ್ತು ಕಾಯಿಲೆ, ಮಕ್ಕಳ ಶಿಕ್ಷಣಕ್ಕಾಗಿ ಮನೆ, ಮಠ ಕಳೆದುಕೊಳ್ತಾರೆ. 2,000 ರೂಪಾಯಿ ಧರ್ಮಕ್ಕೆ ಕೊಡಲ್ಲ. ಬಹಳ ದಾರಾಳತನದಿಂದ ಕೊಡ್ತಾ ಇಲ್ಲ. ನೀವು ಕಟ್ಟುವ ಟ್ಯಾಕ್ಸ್ನಲ್ಲೇ ನಿಮಗೆ ಎರಡು ಸಾವಿರ ಹಣ ಕೊಡುತ್ತಿದ್ದಾರೆ" ಎಂದು ಹೇಳಿದರು.
"ಸರ್ಕಾರದವರು 2,500 ರೂಪಾಯಿಯನ್ನು ಬರಗಾಲದ ಪರಿಹಾರದ ಹಣವಾಗಿ ಕೊಡ್ತೀವಿ ಅಂತಾರೆ. ಯಾದಗಿರಿ ಭಾಗದಲ್ಲಿ ಎರಡೂವರೆ ಸಾವಿರಕ್ಕಿಂತ ಕಡಿಮೆ ಹಣವನ್ನು ಭಿಕ್ಷೆ ಕೊಟ್ಟ ರೀತಿ ಕೊಟ್ಟಿದ್ದಾರೆ. ಆ ಹಣ ವಾಪಸ್ ಕೊಡ್ತೀವಿ ಅಂತ ಆ ಭಾಗದ ರೈತರು ಹೇಳ್ತಾರೆ. ನನ್ನ ಹತ್ತಿರ ಶ್ರೀಮಂತರು ಬರಲ್ಲ, ನೋವನ್ನು ಅನುಭವಿಸುವ ಬಡವರೇ ಬರೋದು. ಇಡೀ ರಾಜ್ಯದ ಪ್ರತಿಯೊಂದು ಕುಟುಂಬಗಳು ಕೈಚಾಚಬಾರದು. ಕೈ ಎತ್ತಿ ಕೊಡುವಂತೆ ಬದುಕಬೇಕು. ನನಗೆ ಐದು ವರ್ಷ ಸರ್ಕಾರ ಕೊಟ್ಟರೆ ಎಲ್ಲಾ ಕೆಲಸವನ್ನು ಮಾಡಬಹುದು. ರಾಜ್ಯದ ಖಜಾನೆಯನ್ನು ನೀವು ತುಂಬಿಸಿದ್ದೀರಿ. ನಾನು ಹಲವಾರು ಸಮಸ್ಯೆಗಳನ್ನು ಎದುರಿಸಿ, ನಿಮ್ಮ ಮುಂದೆ ಮಾತನಾಡುತ್ತಿದ್ದೇನೆ ಎಂದರೆ ನಿಮ್ಮೆಲ್ಲರ ಆಶೀರ್ವಾದ" ಎಂದರು.
"ಕುಮಾರಸ್ವಾಮಿ ಅಂದರೆ ದೇವೇಗೌಡರ ಮಗ ಅಂತ ಈಗ ಹೇಳಲ್ಲ. ನಿಮ್ಮ ಪ್ರೀತಿ, ವಿಶ್ವಾಸದಿಂದ ಕುಮಾರಸ್ವಾಮಿ ಎಂದು ರಾಜ್ಯದ ಜನ ಗುರುತಿಸುತ್ತಾರೆ. ಅವನ್ಯಾರೋ ಮಹಾನುಭಾವ ಅವರ ಕುಟುಂಬದ ಏಳು ಜನರನ್ನು ಹೊಳಕಲ್ಲಿನಿಂದ ಜಜ್ಜಿ ಸಾಯಿಸಿದ್ದಾನೆ. ನಿಮ್ಮ ಕುಟುಂಬದಲ್ಲಿ ಏನೇ ಸಮಸ್ಯೆ ಬಂದರೂ ಉದ್ರೇಕಕ್ಕೆ ಒಳಗಾಗಬಾರದು. ನಿಮ್ಮ ಕುಟುಂಬದಲ್ಲಿ ಆ ರೀತಿ ಘಟನೆಗಳು ಆಗಬಾರದು" ಎಂದು ನುಡಿದರು.