ನವದೆಹಲಿ, ನ.15 (DaijiworldNews/AA): ಯುಪಿಎಸ್ಸಿ ಪರೀಕ್ಷೆಯಲ್ಲಿ ಯಶಸ್ಸು ಗಳಿಸುವುದೆಂದರೆ ಕೇವಲ ಗಂಟೆಗಟ್ಟಲೆ ಓದುವುದು ಅಥವಾ ರಾಶಿಗಟ್ಟಲೆ ಪುಸ್ತಕಗಳನ್ನು ಸಂಗ್ರಹಿಸುವುದಲ್ಲ. ಬದಲಾಗಿ ಸ್ಪಷ್ಟವಾದ ಕಾರ್ಯತಂತ್ರ, ಸರಿಯಾದ ಅಧ್ಯಯನ ಸಾಮಗ್ರಿಗಳ ಆಯ್ಕೆ ಮಾಡುವುದಾಗಿದೆ. ಹೀಗೆ 2025ರ ಯುಪಿಎಸ್ಸಿ ಪರೀಕ್ಷೆಯಲ್ಲಿ ತಮ್ಮ ಎರಡನೇ ಪ್ರಯತ್ನದಲ್ಲೇ ಅಖಿಲ ಭಾರತ ಮಟ್ಟದಲ್ಲಿ 32ನೇ ರ್ಯಾಂಕ್ ಪಡೆದ ಉತ್ಕರ್ಷ್ ಯಾದವ್ ಅವರ ಯಶೋಗಾಥೆ ಇದು.

ದೆಹಲಿ ವಿಶ್ವವಿದ್ಯಾಲಯದಿಂದ ಭೂಗೋಳಶಾಸ್ತ್ರ ಮತ್ತು ಅರ್ಥಶಾಸ್ತ್ರದಲ್ಲಿ ಪದವಿ ಪಡೆದಿರುವ ಉತ್ಕರ್ಷ್, ಲಿಖಿತ ಪರೀಕ್ಷೆಯಲ್ಲಿ ಒಟ್ಟು 852 ಅಂಕಗಳನ್ನು ಗಳಿಸಿದ್ದಾರೆ. ಇದರಲ್ಲಿ ಐಚ್ಛಿಕ ವಿಷಯವಾದ ಭೂಗೋಳಶಾಸ್ತ್ರವೊಂದರಲ್ಲೇ 292 ಅಂಕಗಳನ್ನು ಪಡೆಯುವ ಮೂಲಕ, ಆ ವಿಷಯದಲ್ಲಿ ಅತಿ ಹೆಚ್ಚು ಅಂಕ ಗಳಿಸಿದವರಲ್ಲಿ ಒಬ್ಬರಾಗಿದ್ದಾರೆ.
ಉತ್ಕರ್ಷ್ ಅವರು ಪದವಿಯಲ್ಲಿ ಭೂಗೋಳಶಾಸ್ತ್ರವನ್ನು ಅಧ್ಯಯನ ಮಾಡಿದ್ದರಿಂದ ಮತ್ತು ಅದರ ಪರಿಕಲ್ಪನೆಗಳ ಮೇಲೆ ಹಿಡಿತವಿದ್ದ ಕಾರಣ, ಐಚ್ಛಿಕ ವಿಷಯವಾಗಿ ಭೂಗೋಳಶಾಸ್ತ್ರವನ್ನು ಆಯ್ಕೆ ಮಾಡಿಕೊಂಡರು. ಐಚ್ಛಿಕ ವಿಷಯಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಿದ ಅವರು, ಪ್ರಮಾಣಿತ ಪುಸ್ತಕಗಳು, ಸಂಕ್ಷಿಪ್ತ ನೋಟ್ಸ್, ಹಿಂದಿನ ವರ್ಷದ ಪ್ರಶ್ನೆ ಪತ್ರಿಕೆಗಳು ಹಾಗೂ ನಿಯಮಿತ ಉತ್ತರ ಬರೆಯುವ ಅಭ್ಯಾಸವನ್ನು ಒಳಗೊಂಡ ವ್ಯವಸ್ಥಿತ ವಿಧಾನವನ್ನು ಅನುಸರಿಸಿದರು.
ಉತ್ಕರ್ಷ್ ಅವರ ಶಿಸ್ತುಬದ್ಧ ತಯಾರಿ, ನಿರಂತರ ಅಧ್ಯಯನದ ಫಲವಾಗಿ ತಮ್ಮ ಎರಡನೇ ಪ್ರಯತ್ನದಲ್ಲಿ 2025ರ ಯುಪಿಎಸ್ಸಿ ಪರೀಕ್ಷೆಯಲ್ಲಿ 32ನೇ ರ್ಯಾಂಕ್ ಗಳಿಸುವಲ್ಲಿ ಸಫಲರಾಗುತ್ತಾರೆ. ಈ ಮೂಲಕ ಅನೇಕ ಯುಪಿಎಸ್ಸಿ ಅಭ್ಯರ್ಥಿಗಳಿಗೆ ಉತ್ಕರ್ಷ್ ಅವರು ಮಾದರಿಯಾಗಿದ್ದಾರೆ.