ಬೆಂಗಳೂರು, ನ.15 (DaijiworldNews/AA): 35 ವರ್ಷ ಮತ್ತು ಅದಕ್ಕಿಂತ ಮೇಲ್ಪಟ್ಟ ಮಹಿಳೆಯರಿಗೆ ಸಮಗ್ರ ಆರೋಗ್ಯ ಸೇವೆ ಒದಗಿಸುವ ಕರ್ನಾಟಕದ ಮಹತ್ವಾಕಾಂಕ್ಷೆಯ ಮಧ್ಯವಯಸ್ಕ ಮಹಿಳೆಯರ ಆರೋಗ್ಯ ಮತ್ತು ಋತುಬಂಧ ಕಾರ್ಯಕ್ರಮವಾದ 'ಋತು ತಾರೆ'ಯನ್ನು ಮೂರು ತಿಂಗಳ ಪ್ರಾಯೋಗಿಕ ಯೋಜನೆಯಾಗಿ ಜಾರಿಗೊಳಿಸಲು ದಕ್ಷಿಣ ಕನ್ನಡ ಜಿಲ್ಲೆಯನ್ನು ಆಯ್ಕೆ ಮಾಡಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್ ಘೋಷಿಸಿದ್ದಾರೆ.

ನಟಿ ಹಾಗೂ ಮಾಜಿ ಸಂಸದೆ ರಮ್ಯಾ ಅವರನ್ನು ಈ ಯೋಜನೆಯ ರಾಯಭಾರಿಯಾಗಿ ನೇಮಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಖಾದರ್ ಅವರು ಸಾಮಾಜಿಕ ಜಾಲತಾಣ 'ಎಕ್ಸ್' ಮೂಲಕ ಈ ನಿರ್ಧಾರವನ್ನು ಪ್ರಕಟಿಸಿದ್ದಾರೆ.
"ಇಂದು ನಮ್ಮ ಇಲಾಖೆಯು 'ಋತು ತಾರೆ' ಅನುಷ್ಠಾನಕ್ಕೆ ಆದೇಶ ಹೊರಡಿಸಿದೆ. ದಕ್ಷಿಣ ಕನ್ನಡದಲ್ಲಿ ಮೂರು ತಿಂಗಳ ಪ್ರಾಯೋಗಿಕ ಯೋಜನೆ ಆರಂಭವಾಗಲಿದ್ದು, ಇದರಲ್ಲಿ ಪ್ರತ್ಯೇಕ ಚಿಕಿತ್ಸಾಲಯಗಳು (ಕ್ಲಿನಿಕ್), ಸಮಗ್ರ ಆರೋಗ್ಯ ತಪಾಸಣೆ, ಮಾನಸಿಕ ಆರೋಗ್ಯ ಮತ್ತು ಪೌಷ್ಟಿಕಾಂಶದ ಬೆಂಬಲ, ಹೆಚ್ಚಿನ ಚಿಕಿತ್ಸೆಗೆ ರೆಫರಲ್ ಸೇವೆ ಹಾಗೂ ಮಧ್ಯವಯಸ್ಸಿನ ಆರೋಗ್ಯ ಕಾರ್ಡ್ ಒದಗಿಸಲಾಗುವುದು. ಪ್ರಾಯೋಗಿಕ ಹಂತದ ಯಶಸ್ಸಿನ ನಂತರ ಈ ಕಾರ್ಯಕ್ರಮವನ್ನು ರಾಜ್ಯಾದ್ಯಂತ ವಿಸ್ತರಿಸಲು ಸರ್ಕಾರ ಕ್ರಮ ಕೈಗೊಳ್ಳಲಿದೆ" ಎಂದು ಅವರು ಪೋಸ್ಟ್ ಮಾಡಿದ್ದಾರೆ.
ತಾಯ್ತನದ ನಂತರವೂ ಮಹಿಳೆಯರ ಆರೋಗ್ಯ ಸಮಸ್ಯೆಗಳಿಗೆ ಸ್ಪಂದಿಸುವ ಅಗತ್ಯವನ್ನು ಒತ್ತಿಹೇಳಿದ ಖಾದರ್, "ಮಹಿಳೆಯರ ಆರೋಗ್ಯ ಕಾಳಜಿಯು ತಾಯ್ತನದೊಂದಿಗೆ ಕೊನೆಗೊಳ್ಳುವುದಿಲ್ಲ. ಋತುಬಂಧದ ಹಂತವನ್ನು ಮಹಿಳೆಯರು ಮೌನವಾಗಿ ಸಹಿಸಿಕೊಳ್ಳುವಂತಾಗಬಾರದು" ಎಂದಿದ್ದಾರೆ.
ಮಧ್ಯವಯಸ್ಸಿನಲ್ಲಿ ಎದುರಾಗುವ ದೈಹಿಕ ಮತ್ತು ಭಾವನಾತ್ಮಕ ಸವಾಲುಗಳ ಕುರಿತು ಪ್ರಸ್ತಾಪಿಸಿದ ಅವರು, "ನಿದ್ರಾಹೀನತೆ, ದೇಹದಲ್ಲಿ ದಿಢೀರ್ ಉಷ್ಣತೆ ಹೆಚ್ಚಾಗುವುದು, ಕೀಲು ನೋವು, ಮೂಳೆಗಳ ಸವೆತ, ಆತಂಕ ಮತ್ತು ಭಾವನಾತ್ಮಕ ಬದಲಾವಣೆಗಳು ಗಂಭೀರ ಆರೋಗ್ಯ ಸಮಸ್ಯೆಗಳಾಗಿವೆ. ಇವುಗಳನ್ನು ಕೇವಲ ವಯಸ್ಸಾಗುವಿಕೆಯ ಸಹಜ ಪ್ರಕ್ರಿಯೆ ಎಂದು ನಿರ್ಲಕ್ಷಿಸದೆ, ಸೂಕ್ತ ತಿಳುವಳಿಕೆ, ಸಕಾಲಿಕ ರೋಗನಿರ್ಣಯ ಮತ್ತು ಸೂಕ್ತ ವೈದ್ಯಕೀಯ ಆರೈಕೆ ನೀಡಬೇಕಿದೆ" ಎಂದು ಬರೆದುಕೊಂಡಿದ್ದಾರೆ.
"ಪ್ರತಿಯೊಬ್ಬ ಮಹಿಳೆಯೂ ಗೌರವಯುತವಾಗಿ ವಯಸ್ಸಾಗಲು, ಉತ್ತಮ ಆರೋಗ್ಯದಿಂದ ಬದುಕಲು ಮತ್ತು ಜೀವನದ ಪ್ರತಿಯೊಂದು ಹಂತದಲ್ಲೂ ಆರೈಕೆ ಪಡೆಯಲು ಅರ್ಹಳಾಗಿದ್ದಾಳೆ. 'ಋತು ತಾರೆ' ಮೂಲಕ ನಾವು ಅದನ್ನು ನನಸಾಗಿಸುವತ್ತ ಪ್ರಮುಖ ಹೆಜ್ಜೆ ಇಟ್ಟಿದ್ದೇವೆ" ಎಂದು ಅವರು ಹೇಳಿದ್ದಾರೆ.
ರಮ್ಯಾ ಅವರ ನೇಮಕವನ್ನು ಘೋಷಿಸಿದ ಅವರು, "ರಮ್ಯಾ ಅವರ ಧ್ವನಿ ಮತ್ತು ಪ್ರಭಾವವು ಈ ಮಹತ್ವದ ಸಂದೇಶವನ್ನು ಕರ್ನಾಟಕದಾದ್ಯಂತ ಇರುವ ಮಹಿಳೆಯರಿಗೆ ತಲುಪಿಸಲು ಸಹಾಯ ಮಾಡುತ್ತದೆ" ಎಂದು ಖಾದರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಸಾರ್ವಜನಿಕ ಆರೋಗ್ಯ ಸಂಸ್ಥೆಗಳ ಮೂಲಕ ಸಮಗ್ರ ಆರೈಕೆ
'ಋತು ತಾರೆ - ಕರ್ನಾಟಕ ರಾಜ್ಯ ಮಧ್ಯವಯಸ್ಕ ಮಹಿಳೆಯರ ಆರೋಗ್ಯ ಮತ್ತು ಋತುಬಂಧ ಕಾರ್ಯಕ್ರಮ' ಎಂಬ ಹೆಸರಿನ ಈ ಯೋಜನೆಯು ಪೆರಿಮೆನೋಪಾಸ್, ಮೆನೋಪಾಸ್ ಮತ್ತು ಪೋಸ್ಟ್-ಮೆನೋಪಾಸ್ ಹಂತಗಳ ಮೇಲೆ ಕೇಂದ್ರೀಕರಿಸಲಿದೆ. ಅಸ್ತಿತ್ವದಲ್ಲಿರುವ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ಮೂಲಕವೇ ತಪಾಸಣೆ, ವೈದ್ಯಕೀಯ ಮೌಲ್ಯಮಾಪನ, ಆಪ್ತಸಮಾಲೋಚನೆ ಮತ್ತು ಹೆಚ್ಚಿನ ಚಿಕಿತ್ಸೆಗೆ ರೆಫರಲ್ ಸೇವೆಗಳನ್ನು ಒದಗಿಸುವ ಗುರಿಯನ್ನು ಇದು ಹೊಂದಿದೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಆಯುಕ್ತಾಲಯವು ಪ್ರಾಯೋಗಿಕ ಯೋಜನೆಯ ಅನುಷ್ಠಾನದ ರೂಪುರೇಷೆಗಳ ಕುರಿತು ಅಧಿಕೃತ ಜ್ಞಾಪನ ಪತ್ರವನ್ನು ಹೊರಡಿಸಿದೆ.
ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಆಯುಷ್ಮಾನ್ ಆರೋಗ್ಯ ಮಂದಿರಗಳು, ತಾಲೂಕು ಆಸ್ಪತ್ರೆಗಳು, ಜಿಲ್ಲಾ ಆಸ್ಪತ್ರೆ ಮತ್ತು ನಿಗದಿತ ವೈದ್ಯಕೀಯ ಕಾಲೇಜುಗಳು ಸೇರಿದಂತೆ ಜಿಲ್ಲೆಯಲ್ಲಿರುವ ಆರೋಗ್ಯ ಸೌಲಭ್ಯಗಳನ್ನು ಗುರುತಿಸುವಂತೆ ದಕ್ಷಿಣ ಕನ್ನಡ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗೆ ನಿರ್ದೇಶನ ನೀಡಲಾಗಿದೆ.
ಯೋಜನೆಯಲ್ಲಿ ಭಾಗವಹಿಸುವ ಆರೋಗ್ಯ ಕೇಂದ್ರಗಳನ್ನು ಗುರುತಿಸುವುದು, ಲಭ್ಯವಿರುವ ಮೂಲಸೌಕರ್ಯ, ಮಾನವ ಸಂಪನ್ಮೂಲ ಮತ್ತು ತಜ್ಞ ವೈದ್ಯರ ಸೇವೆಗಳನ್ನು ಮೌಲ್ಯಮಾಪನ ಮಾಡುವುದು ಹಾಗೂ 35 ವರ್ಷ ಮೇಲ್ಪಟ್ಟ ಅರ್ಹ ಮಹಿಳೆಯರನ್ನು ಗುರುತಿಸುವುದು ಸೇರಿದಂತೆ ಜಿಲ್ಲಾ ಮಟ್ಟದ ಅನುಷ್ಠಾನ ಯೋಜನೆಯನ್ನು ಡಿಎಚ್ಒ ಸಿದ್ಧಪಡಿಸಬೇಕಿದೆ.
ಆಶಾ ಕಾರ್ಯಕರ್ತೆಯರು, ಆಶಾ ಮೆಂಟರ್ಗಳು, ಸಮುದಾಯ ಆರೋಗ್ಯ ಅಧಿಕಾರಿಗಳು ಮತ್ತು ವೈದ್ಯಾಧಿಕಾರಿಗಳು ಈ ಕಾರ್ಯಕ್ರಮದ ಅನುಷ್ಠಾನದಲ್ಲಿ ಪಾಲ್ಗೊಳ್ಳಲಿದ್ದಾರೆ.
ಪ್ರತಿ ಬುಧವಾರ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ತಾಲೂಕು ಆಸ್ಪತ್ರೆಗಳು ಮತ್ತು ಜಿಲ್ಲಾ ಆಸ್ಪತ್ರೆಯಲ್ಲಿ ವಿಶೇಷ ಕ್ಲಿನಿಕ್ ಅವಧಿಗಳು ನಡೆಯಲಿವೆ. ನಿಗದಿತ ವೈದ್ಯಕೀಯ ಕಾಲೇಜುಗಳಲ್ಲಿ ಸಿಬ್ಬಂದಿ ಲಭ್ಯತೆ ಮತ್ತು ಕಾರ್ಯಸಾಧ್ಯತೆಗೆ ಅನುಗುಣವಾಗಿ ಪ್ರತಿ ಶನಿವಾರ ವಿಶೇಷ ಕ್ಲಿನಿಕ್ಗಳನ್ನು ಆಯೋಜಿಸಲಾಗುವುದು.
ತಪಾಸಣೆ, ಆಪ್ತಸಮಾಲೋಚನೆ ಮತ್ತು ರೆಫರಲ್ ಸೇವೆಗಳು
ಈ ಕಾರ್ಯಕ್ರಮದಡಿ ಅಧಿಕ ರಕ್ತದೊತ್ತಡ, ಮಧುಮೇಹ, ಬೊಜ್ಜು ಮತ್ತು ಇತರ ಹೃದಯ ಸಂಬಂಧಿ ಅಪಾಯಕಾರಿ ಅಂಶಗಳ ತಪಾಸಣೆಯ ಜೊತೆಗೆ ಸ್ತನ ಮತ್ತು ಗರ್ಭಕಂಠದ ಕ್ಯಾನ್ಸರ್ ತಪಾಸಣೆಯನ್ನೂ ನಡೆಸಲಾಗುವುದು.
ಮಾನಸಿಕ ಆರೋಗ್ಯ ತಪಾಸಣೆ, ಪೌಷ್ಟಿಕಾಂಶದ ಕುರಿತು ಆಪ್ತಸಮಾಲೋಚನೆ, ಮೂಳೆಗಳ ಆರೋಗ್ಯ ವೃದ್ಧಿ ಮತ್ತು ಆಸ್ಟಿಯೊಪೊರೋಸಿಸ್ (ಮೂಳೆ ಸವೆತ) ತಡೆಗಟ್ಟುವಿಕೆ ಕೂಡ ಈ ಸಮಗ್ರ ಸೇವೆಯ ಭಾಗವಾಗಿರಲಿವೆ.
ಪರಿಣಾಮಕಾರಿ ಅನುಷ್ಠಾನಕ್ಕಾಗಿ ಇಲಾಖೆಯು ಪ್ರಮಾಣಿತ ತಪಾಸಣಾ ನಿಯಮಾವಳಿಗಳು, ಮಧ್ಯವಯಸ್ಸಿನ ಆರೋಗ್ಯ ಕಾರ್ಡ್ಗಳು, ರೆಫರಲ್ ವ್ಯವಸ್ಥೆ ಮತ್ತು ಆರೋಗ್ಯ ಕಾರ್ಯಕರ್ತರಿಗೆ ತರಬೇತಿ ಕೈಪಿಡಿಗಳನ್ನು ಸಿದ್ಧಪಡಿಸಲಿದೆ.
ತಪಾಸಣೆಯ ವ್ಯಾಪ್ತಿ, ರೆಫರಲ್ ಸೇವೆಗಳು, ಸೌಲಭ್ಯಗಳ ಲಭ್ಯತೆ ಮತ್ತು ಕಾರ್ಯಾಚರಣೆಯ ಕಾರ್ಯಸಾಧ್ಯತೆಯ ಆಧಾರದ ಮೇಲೆ ಈ ಮೂರು ತಿಂಗಳ ಪ್ರಾಯೋಗಿಕ ಯೋಜನೆಯನ್ನು ಮೌಲ್ಯಮಾಪನ ಮಾಡಲಾಗುವುದು. ಇದರ ಫಲಿತಾಂಶಗಳು 'ಋತು ತಾರೆ' ಯೋಜನೆಯನ್ನು ಹಂತ ಹಂತವಾಗಿ ಕರ್ನಾಟಕದಾದ್ಯಂತ ವಿಸ್ತರಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಿದ್ಧಪಡಿಸಲು ನೆರವಾಗಲಿವೆ.